ದೀಕ್ಷಿತ್ ಶೆಟ್ಟಿ-ಶ್ರೀನಿಧಿ ʼವಿಡಿಯೊʼ ವೈರಲ್; ಏನಿದು ಹೊಸ ವಿಷಯ?

ಬ್ಲಿಂಕ್ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಹಾಗೂ ದೀಕ್ಷಿತ್ ಶೆಟ್ಟಿ ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ಒಂದಾಗಿದ್ದಾರೆ. ಆದರೆ, ವಿಶೇಷ ಎಂದರೆ ಈ ಬಾರಿ ದಿಕ್ಷಿತ್ ಶೆಟ್ಟಿ ನಾಯಕ ನಟರಾಗಿಲ್ಲ. ಬದಲಿಗೆ, ನಿರ್ಮಾಪಕರಾಗಿ ಹೊಸ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಹೌದು, ʼಧೀ ಸಿನಿಮಾಸ್ʼ ಎಂಬ ಸ್ವಂತ ನಿರ್ಮಾಣ ಸಂಸ್ಥೆ ಶುರು ಮಾಡಿರುವ ದೀಕ್ಷಿತ್ ಶೆಟ್ಟಿ ಮೊದಲ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚಗೆಷ್ಟೆ ಇದರ ಶಿರ್ಷಿಕೆ ಅನಾವರಣ ಮಾಡಲಾಗಿದ್ದು, ಇದಕ್ಕೆ ʼವಿಡಿಯೋʼ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ | ಸನ್ ಆಫ್ ಮುತ್ತಣ್ಣ ಚಿತ್ರಕ್ಕೆ ಸಂಜಿತ್ ಹೆಗಡೆ ಧ್ವನಿ
ಏನಿದು ವಿಡಿಯೋ?
ಇದನ್ನು ಕನ್ನಡದ ಮೊದಲ ವ್ಲಾಗ್ಯುಮೆಂಟರಿ ಎನ್ನಬಹುದು. ಈ ಹಿಂದೆ ಸೈನ್ಸ್ ಫಿಕ್ಷನ್ ಮೂಲಕ ಕಥೆ ಹೇಳಿದ್ದ ʼಬ್ಲಿಂಕ್ʼ ನಿರ್ದೇಶಕ ಶ್ರೀನಿಧಿ ಈ ಬಾರಿ ಹಾರರ್ ಜಾನರ್ ಕಥೆ ಹೇಳಲು ಸಿದ್ಧವಾಗಿದ್ದಾರೆ. ಈಗಾಗಲೇ ಲಭ್ಯವಿರುವ ಹಲವು ದೃಶ್ಯಗಳನ್ನು ಅಂದರೆ ʼಫೌಂಡ್ ಫುಟೇಜಸ್ʼ ಸಹಾಯದಿಂದ ಹಾಗೂ ಒಂದು ವಿಭಿನ್ನ ಹಾರರ್ ಕಥೆಯನ್ನು ಹೇಳಲು ಈ ಬಾರಿ ಶ್ರೀನಿಧಿ ರೆಡಿ ಆಗಿದ್ದಾರೆ. ಬ್ಲಿಂಕ್ ಚಿತ್ರದಲ್ಲಿ ತೆರೆ ಹಿಂದೆ ಕೆಲಸ ಮಾಡಿದ ತಂಡ ಇದರಲ್ಲೂ ಕೆಲಸ ಮಾಡಲಿದೆ. ಭರತ, ಜೀವನ್ ಶಿವಕುಮಾರ್, ತೇಜಸ್ ಎಂ, ಪ್ರಿಯಾ ಆಚಾರ್, ನಲ್ಮೆ ನಾಚಿಯಾರ್ ನಟಿಸುತ್ತಿದ್ದು, ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಸಂಕಲನ ಹಾಗೂ ಪ್ರಸನ್ನ ಎಂ ಎಸ್ ಸಂಗೀತ ಈ ಚಿತ್ರಕ್ಕೆ ಇರಲಿದೆ. ವಿಶೇಷ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ಕೂಡ ಬಣ್ಣ ಹಚ್ಚಲಿದ್ದಾರೆ.

ಯಾವಾಗ ತೆರೆಗೆ:
ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನೇನು ಕೆಲವು ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಅದನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಚಿತ್ರತಂಡ ತಯಾರಿ ನಡೆಸಿದೆ. ಇದರ ಜತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಭರದಿಂದ ಸಾಗಿದ್ದು, ಆದಷ್ಟು ಬೇಗ ತೆರೆಗೆ ಬರಲು ಚಿತ್ರತಂಡ ಕೆಲಸ ಮಾಡುತ್ತಿದೆ.