ಸೋನು ನಿಗಂ ಬ್ಯಾನ್ ಆದರೆ ಏನಾಯಿತು?

ಇತ್ತೀಚೆಗೆ ಗಾಯಕ ಸೋನು ನಿಗಂ ಅನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಆದರೆ, ಹೀಗೆ ಮಾಡುವುದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಅಷ್ಟಕ್ಕೂ ಬ್ಯಾನ್ ಮಾಡುವ ಮೊದಲು ಸೋನು ನಿಗಂಗೆ ಕನ್ನಡದಲ್ಲಿ ಈ ಮಟ್ಟದ ಅವಕಾಶ, ಖ್ಯಾತಿ, ಪ್ರೀತಿ ದೊರಕಲು ಕಾರಣವೇನು? ಸೋನು ಅಷ್ಟೇ ಅಲ್ಲ, ಕನ್ನಡ ಹಾಡುಗಳನ್ನು ಹಾಡಲು ಇತರ ಭಾಷೆಗಳ ಗಾಯಕರ ಮೊರೆ ಹೋಗುವ ಹಿಂದಿನ ಉದ್ದೇಶವೇನು ಎನ್ನುವುದರ ಕುರಿತ ವಿವರ ಇಲ್ಲಿದೆ.
ಬೇರೆ ಭಾಷೆಯವರಿಗೆ ಆದ್ಯತೆ:
ಕನ್ನಡ ಚಿತ್ರರಂಗವು ತನ್ನದೇ ಆದ ವಿಶಿಷ್ಟ ಸಂಸ್ಕೃತಿ, ಶೈಲಿ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಸಿನಿಮಾಗಳು ಬರುತ್ತಿಲ್ಲ ಅಥವಾ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿವೆ. ಆದರೆ, ಹಿಂದೆ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಮನದಲ್ಲಿ ವಿಶೇಷ ಸ್ಥಾನವಿದೆ. ಹಿಂದಿನ ಹಲವು ಸಿನಿಮಾಗಳಿಂದಲೂ ಇತರ ಭಾಷೆಯ ಗಾಯಕರಿಗೆ, ನಟರಿಗೆ, ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ ಅವಕಾಶ ನೀಡಲಾಗಿದೆ. ಅವರಲ್ಲಿ ಅನೇಕರು ಇಂದಿಗೂ ಕನ್ನಡದ ಜತೆ ವಿಶೇಷ ಸಂಬಂಧ ಇಟ್ಟುಕೊಂಡಿದ್ದಾರೆ. ಸೋನು ನಿಗಂ ಕನ್ನಡದಲ್ಲಿ 600ಕ್ಕೂ ಅಧಿಕ ಹಾಡುಗಳನ್ನು ಹಾಡಿರಬಹುದು. ಹಾಗೆಯೇ, ಶ್ರೇಯಾ ಘೋಷಾಲ್, ಉದಿತ್ ನಾರಾಯಣ್, ಮಿಕಾ ಸಿಂಗ್, ಕುನಾಲ್ ಗಾಂಜವಾಲ ಹೀಗೆ ಅನೇಕ ಗಾಯಕರಿದ್ದಾರೆ.
ಯಾಕೆ ಈ ಆದ್ಯತೆ?
ಕನ್ನಡದಲ್ಲಿ ಅನೇಕ ಗಾಯಕರಿದ್ದರೂ, ಏಕೆ ಬೇರೆ ಭಾಷೆ ಗಾಯಕರಿಗೆ ಆದ್ಯತೆ ನೀಡಲಾಗುತ್ತದೆ ಎಂಬ ಪ್ರಶ್ನೆ ಮೂಡಬಹುದು. ಇದಕ್ಕ ಮುಖ್ಯವಾದ ಕಾರಣ ʼಮಾರ್ಕೆಟಿಂಗ್ʼ. ಸ್ಟಾರ್ ಗಾಯಕರ ಮಾರುಕಟ್ಟೆ ಶಕ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರನ್ನು ಆಯ್ಕೆ ಮಾಡಲಾಗುತ್ತದೆ. ಅವರ ಹೆಸರಿನಿಂದ ಚಿತ್ರಗಳ ಟ್ರೇಲರ್, ಹಾಡುಗಳನ್ನು ಆಕರ್ಷಿಸಬಹುದು, ಆಡಿಯೊ ಹಕ್ಕುಗಳು ಹೆಚ್ಚಿನ ಹಣಕ್ಕೆ ಮಾರಟವಾಗಬಹುದು, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಇತರ ಭಾಷೆಗಳ ಗಾಯಕರ ಮೊರೆ ಹೋಗಲಾಗುತ್ತದೆ. ಹಿಂದಿ ಅಥವಾ ತಮಿಳು ಗಾಯಕರು ಹಾಡಿದ ಕನ್ನಡ ಗೀತೆಗಳು ಇತರ ರಾಜ್ಯದ ಪ್ರೇಕ್ಷಕರನ್ನು ಕೂಡ ತಲುಪುತ್ತವೆ.
ತಪ್ಪಿದ್ದೆಲ್ಲಿ?
ಈ ಹಿಂದೆ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಕನ್ನಡದಲ್ಲಿ ಖ್ಯಾತಿ ಪಡೆದಿದ್ದು, ಅವರ ಹಿಂದಿ ಹಾಡು ʼಜೈ ಹೊʼ ಫೇಮಸ್ ಆದ ಬಳಿಕ. ಅಲ್ಲಿಯವರೆಗೆ ಅವರಿಗೆ ಹೆಚ್ಚು ಅವಕಾಶಗಳು ದೊರೆತಿರಲಿಲ್ಲವಂತೆ. ಕನ್ನಡದ ಪ್ರತಿಭೆಗಳನ್ನು ಕನ್ನಡದವರೇ ಗುರುತಿಸಿ ಅವಕಾಶ ಕೊಡದಿದ್ದರೆ ಯಾರನ್ನು ದೂಷಿಸಿ ಏನು ಪ್ರಯೋಜನ? ಇಂತಹ ಅನೇಕ ಗಾಯಕರು ಕನ್ನಡದಲ್ಲಿದ್ದಾರೆ. ಆದರೆ, ಒಂದು ಚಿತ್ರತಂಡ ಮಾರ್ಕೆಟಿಂಗ್ ಅಥವಾ ಇನ್ನಿತರ ಬಿಝಿನೆಸ್ ದೃಷ್ಟಿಯಿಂದ ಪರಭಾಷೆಯ ಗಾಯಕರ ಮೊರೆ ಹೋಗಿ ಈಗ ಅವರನ್ನೇ ಬ್ಯಾನ್ ಮಾಡಿದರೆ ಯಾವುದೇ ಲಾಜಿಕ್ ಕಾಣುವುದಿಲ್ಲ. ಇತ್ತೀಚೆಗೆ ಒಂದು ಚಿತ್ರತಂಡ ಸಂಜಿತ್ ಹೆಗಡೆ ಅತಿಯಾದ ಸಂಭಾವನೆ ಕೇಳುತ್ತಾರೆ ಎಂದು ಸಂಜಿತ್ ವಿರುದ್ಧ ಕಿಡಿ ಕಾರಿತ್ತು. ಸಂಜಿತ್ ಅವರ ಮಾರುಕಟ್ಟೆಗೆ ತಕ್ಕಂತೆ ಡಿಮಾಂಡ್ ಮಾಡುತ್ತಾರೆ. ಈ ಹಾಡು ಸಂಜಿತ್ ಧ್ವನಿಯಲ್ಲಿ ಕೇಳಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ಒಂದೆಡೆಯಾದರೆ ಇನ್ನೊಂದೆಡೆ ಅವರ ಹೆಸರಿನಿಂದ ಹಾಡು ಇನ್ನಷ್ಟು ಜನರನ್ನು ತಲುಪಬಹುದು ಎಂಬ ಉದ್ದೇಶವಿರುತ್ತದೆ. ಎಲ್ಲ ಕಲಾವಿದರೂ ಒಂದೊಳ್ಳೆ ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತಾರೆ. ಎಲ್ಲಿ ಉತ್ತಮ ಅವಕಾಶ ಸಿಗುತ್ತದೆಯೋ ಅಲ್ಲಿ ಹಾರುವುದು ಸಹಜ ಎಂಬಂತಾಗಿದೆ. ಅದು ತಪ್ಪು ಎಂದು ಹೇಳುವುದು ಹೇಗೆ?
ಇದನ್ನೂ ಓದಿ |A for Anand: ಪಾಠ ಮಾಡಲು ರೆಡಿ ಆದ ಶಿವಣ್ಣ
ಕನ್ನಡಿಗರ ಸಂಖ್ಯೆ ಹೆಚ್ಚಬೇಕು:
ಇತ್ತೀಚೆಗೆ ಸೊನು ನಿಗಂ ವಿರುದ್ಧ ಅನೇಕರು ಕಿಡಿ ಕಾರಿದ್ದರು. ಅದು ಪೂರ್ತಿ ತಪ್ಪು ಎಂದು ಹೇಳಲಾಗುವುದಿಲ್ಲ. ಆದರೆ, ಅದಕ್ಕೂ ಮುನ್ನ ಕನ್ನಡಿಗರಾಗಿ ಎಷ್ಟು ಭಾಷೆಯ ಬಗ್ಗೆ ಗಮನವಹಿಸಿದ್ದೇವೆ ಎನ್ನುವುದನ್ನು ಅವಲೋಕಿಸಬೇಕಾಗುತ್ತದೆ. ಈಗಲೂ ಅದೆಷ್ಟೋ ಕನ್ನಡ ಸಿನಿಮಾಗಳ ಹಾಡಿನಲ್ಲಿ ಹಿಂದಿ ಪದಗಳು ಇರುತ್ತವೆ. ಕನ್ನಡ ಪದಗಳ ಉಚ್ಚಾರಣೆ, ಬರವಣಿಗೆ, ಬಳಸುವ ಶಬ್ದಗಳು, ಮಾತುಗಳ ಬಗ್ಗೆ ಎಷ್ಟು ಗಮನ ನೀಡಿದ್ದೇವೆ ಎನ್ನುವದನ್ನು ಅವಲೋಕಿಸಬೇಕಾಗುತ್ತದೆ. ಮೊದಲಿನಿಂದಲೂ ಕನ್ನಡ ನೆಲದ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡಿದ್ದರೆ ಎಷ್ಟೋ ಬದಲಾವಣೆಗಳು ಆಗಿರುತ್ತಿದ್ದವು. ಈಗಲೂ ಅನೇಕ ಚಿತ್ರತಂಡಗಳು ಇತರ ಭಾಷೆಯ ಗಾಯಕರನ್ನು, ಸಂಗೀತ ನಿರ್ದೇಶಕರನ್ನು ಕರೆತರಲು ಶ್ರಮಿಸುತ್ತವೆ. ಹಾಗೆಯೇ ಬರುತ್ತಿದ್ದಾರೆ ಕೂಡ. ಆ ಕೆಲಸವನ್ನು ಕನ್ನಡದವರು ಮಾಡಲಾರರು ಎಂಬಂತಿದ್ದಾಗ ಇನ್ನೊಂದು ಆಯ್ಕೆಯತ್ತ ಹೋಗಬಹುದು. ಆದರೆ, ಸ್ಥಳೀಯರು ಇರುವಾಗಲೂ ಮಾರ್ಕೆಟಿಂಗ್ ದೃಷ್ಟಿಯಿಂದ ಇನ್ನೊಬ್ಬರನ್ನು ಕರೆತಂದು ಬಳಿಕ ಅವರನ್ನು ಬ್ಯಾನ್ ಮಾಡುವುದರಲ್ಲಿ ಅರ್ಥವಿಲ್ಲ.
ಸೋನು ನಿಗಂ ವಿವಾದ: ಏನಾಯಿತು?
2025ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಸಂಗೀತ ಕಾರ್ಯಕ್ರಮದಲ್ಲಿ, ಪ್ರೇಕ್ಷಕನೊಬ್ಬ ಕನ್ನಡ ಹಾಡು ಕೇಳಿದಾಗ, ಸೋನು ನಿಗಂ ಪ್ರತಿಕ್ರಿಯಿಸುತ್ತಲೇ, “ಅವನ ‘ಕನ್ನಡ, ಕನ್ನಡ’ ಎನ್ನುತ್ತಿದ್ದ ರೀತಿಯೇ ಪಹಲ್ಗಾಮ್ ಘಟನೆಯಂತೆ ಭಾಸವಾಯಿತು” ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಳಿಕ ಮತ್ತೊಂದು ವಿಡಿಯೊದಲ್ಲಿ ಸೋನು, ʼಮೊದಲ ಹಾಡಿಗೆ ಕೆಲವೇ ಕೆಲವರು ಆಕ್ರೋಶದಿಂದ ʼಕನ್ನಡ ಕನ್ನಡʼ ಎಂದೂ ಕೂಗಿದ್ದರು. ಅವರ ವರ್ತನೆ ಸರಿ ಇಲ್ಲದ ಕಾರಣ ನಾನು ಹಾಗೆ ಪ್ರತಿಕ್ರಿಯಿಸಬೇಕಾಯಿತು. ಅದು ಕೇವಲ ಅವರಿಗೆ ಮಾತ್ರ, ಕನ್ನಡಿಗರನ್ನು ನಾನು ಪ್ರೀತಿಸುತ್ತೇನೆʼ ಎಂದು ಸ್ಪಷ್ಟನೆ ನೀಡಿದ್ದರೂ. ಅವರ ಧಾಟಿ ಸರಿಯಿರಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಇನ್ನಷ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (KFCC) ಅವರ ಮೇಲೆ ‘ಸಹಕಾರ ಇಲ್ಲದ ನಿರ್ಧಾರ’ ಪ್ರಕಟಿಸಿತು. ಅಧ್ಯಕ್ಷ ಎಂ. ನರಸಿಂಹುಲು, ʼಸೋನು ನಿಗಂ ಅವರ ಮೇಲೆ ಕರ್ನಾಟಕದಲ್ಲಿ ಸಹಕಾರವಿಲ್ಲದ ಪರಿಸ್ಥಿತಿ ಇರಲಿದೆ. ಅವರು ಕರ್ನಾಟಕ ಜನತೆಗೆ ಕ್ಷಮೆ ಕೇಳಬೇಕುʼ ಎಂದರು. ಪರಿಣಾಮವಾಗಿ, ಸೋನು ನಿಗಂ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮೆ ಯಾಚಿಸಿದರು. ಇನ್‌ಸ್ಟಾಗ್ರಾಂನಲ್ಲಿ ಸೋನು, ʼಸಾರಿ ಕರ್ನಾಟಕ. ನನ್ನ ಪ್ರೀತಿ ನಿಮ್ಮತ್ತ ನನ್ನ ಅಹಂಹ್ಕಾರಕ್ಕಿಂತ ಹೆಚ್ಚು. ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆʼ ಎಂದು ಬರೆದುಕೊಂಡರು.