ಹಿಟ್‌ 3 ಸಿನಿಮಾ ವಿಮರ್ಶೆ: ರಕ್ತದೋಕುಳಿಯಲ್ಲಿ ಆಕ್ಷನ್‌ ಅಬ್ಬರ

 ಹಿಟ್‌ 3 ಸಿನಿಮಾ ವಿಮರ್ಶೆ: ರಕ್ತದೋಕುಳಿಯಲ್ಲಿ ಆಕ್ಷನ್‌ ಅಬ್ಬರ

ಸಿನಿಮಾ: ಹಿಟ್‌ 3

ನಿರ್ದೇಶನ: ಶೈಲೇಶ್‌ ಕೊಲನು

ತಾರಾಗಣ; ನಾನಿ, ಶ್ರೀನಿಧಿ ಶೆಟ್ಟಿ

ರೇಟಿಂಗ್:‌ 3

ಪ್ರಮೋದ ಮೋಹನ ಹೆಗಡೆ

ಕಥೆಯ ಸಾರಾಂಶ: ಸಮಾಜದ ರಕ್ಷಣೆಗಾಗಿ ಹೋರಾಡುವ ಒಬ್ಬ ವಯೊಲೆಂಟ್‌ ಪೊಲೀಸ್‌ ಅಧಿಕಾರಿಯ ಕಥೆಯಿದು. ಒಂದೇ ಮಾದರಿಯಲ್ಲಿ ನಡೆಯುವ ಸರಣಿ ಕೊಲೆಗಳನ್ನು ಹೇಗೆ ʼಅರ್ಜುನ್‌ ಸರ್ಕಾರ್‌ʼ ಎಂಬ ಪೊಲೀಸ್‌ ಅಧಿಕಾರಿ ಪತ್ತೆ ಹಚ್ಚುತ್ತಾನೆ ಹಾಗೂ ಹೇಗೆ ಅದರ ವಿರುದ್ಧ ಹೋರಾಡಿ ಅದನ್ನು ತಡೆಯುತ್ತಾನೆ ಎನ್ನುವುದೇ ಹಿಟ್: 3 ಚಿತ್ರದ ಸಾರಾಂಶ.

ವಿಮರ್ಶೆ: ಹಿಟ್‌ ಸರಣಿಯ ಮೊದಲೆರಡು ಸಿನಿಮಾಗಳಲ್ಲಿ ನಿರ್ದೇಶಕ ಶೈಲೇಶ್‌ ಕೊಲನು ಒಂದಿಷ್ಟು ಪತ್ತೇದಾರಿ ಅಂಶಳು ಹಾಗೂ ಪೊಲೀಸ್‌ ಇನ್ವೆಸ್ಟಿಗೇಶನ್‌ ವಿಷಯಗಳನ್ನು ಪ್ರಸ್ತುತಪಡಿಸಿದ್ದರು. ಆದರೆ, ಇದೇ ಸರಣಿಯ ಮೂರನೇ ಚಿತ್ರಕ್ಕೆ ಶೈಲೇಶ್‌ ಹೊಸ ದಾರಿಯನ್ನು ಹಿಡಿದಿದ್ದಾರೆ. ಈ ಚಿತ್ರದಲ್ಲಿ ಸಸ್ಪೆನ್ಸ್‌ ಅಥವಾ ಇನ್ವೆಸ್ಟಿಗೇಶನ್‌ ಅಂಶಗಳು ಕೆಡಿಮೆ. ಆದರೆ, ಚಿತ್ರಮಂದಿರದಲ್ಲಿ ಕುಳಿತು ನೋಡಿ ಶಿಳ್ಳೆ ಹೊಡೆಯುತ್ತ ಎಂಜಾಯ್‌ ಮಾಡಲು ಏನೆಲ್ಲ ವಿಷಯಗಳು ಬೇಕೋ ಅವೆಲ್ಲವನ್ನು ಈ ಚಿತ್ರದಲ್ಲಿ ನೋಡಬಹುದು.

ಅರ್ಜುನ್‌ ಸರ್ಕಾರ್‌ (ನಾನಿ) ಒಬ್ಬ ರುತ್‌ಲೆಸ್‌ ಕಾಪ್.‌ ಅಪರಾಧಿಗಳು 10 ಅಡಿ ಜೈಲಿನಲ್ಲಿ ಇರಬೇಕು ಅಥವಾ 6 ಆಡಿ ಭೂಮಿಯೊಳಗಿರಬೇಕು ಎನ್ನುವುದು ಆತನ ಮಂತ್ರ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಾನೆ. ಒಂದಿಷ್ಟು ಸರಣಿ ಕೊಲೆಗಳು ನಡೆಯುತ್ತಿರುತ್ತವೆ. ಆ ಕೊಲೆಗಳು ಯಾರು ಮಾಡುತ್ತಿರುವುದು? ಯಾಕೆ ಮಾಡುತ್ತಿರುವುದು? ಎನ್ನುವುದನ್ನು ಪತ್ತೆ ಹಚ್ಚಲು ಹೋಗುವ ಅರ್ಜುನ್‌ ಸರ್ಕಾರ್‌ ದೊಡ್ಡ ವ್ಯೂಹದೊಳಗೆ ಸಿಲುಕಿಕೊಳ್ಳುತ್ತಾನೆ. ಆ ಕೊಲೆಗಳಿಗೆ ಒಂದು ಸೂಕ್ತ ಅಂತ್ಯ ಹಾಡಿ ಹೇಗೆ ಬರುತ್ತಾನೆ ಅರ್ಜುನ್‌ ಎನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕು.

ಮೊದಲಾರ್ಧದ ಸಿನಿಮಾದಲ್ಲಿ ಕೆಲವು ಕುತೂಹಲಕಾರಿ ಅಂಶಗಳಿವೆ. ದ್ವಿತೀಯಾರ್ಧದಲ್ಲಿ ಕುತೂಹಲ ಕಡಿಮೆಯಾಗಿ ಆಕ್ಷನ್‌ ಅಬ್ಬರ ಹೆಚ್ಚಾಗುತ್ತದೆ. ಹಾಗಂತ, ಸಿನಿಮಾ ಎಲ್ಲಿಯೂ ಬೋರ್‌ ಆಗುವುದಿಲ್ಲ. ಪ್ರತಿ ಸನ್ನಿವೇಶಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ. ಹಾಗಯೇ ಇನ್ನೊಂದು ವಿಶೇಷವಾದ ಅಂಶವೆಂದರೆ, ಕೊಲೆಗಳನ್ನು ಯಾಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿ ನಿರ್ದೇಶಕರು ಹೊಸ ಅಂಶವನ್ನು ತರಲು ಪ್ರಯತ್ನಿಸಿದ್ದಾರೆ. ʼಸಿಟಿಕೆʼ ಅಂದರೆ ಕ್ಯಾಪ್ಚರ್‌, ಟಾರ್ಚರ್‌, ಕಿಲ್‌ ಎಂದರ್ಥ. ಇದೊಂದು ಗುಂಪು ಇಂತಹ ಕೊಲೆಗಳನ್ನು ಮಾಡಿ ಡಾರ್ಕ್‌ ವೆಬ್‌ನಲ್ಲಿ ಅಪ್ಲೋಡ್‌ ಮಾಡುವ ವಿಷಯ ಹೊಸತು ಎನಿಸುವಂತಿದೆ. ಆದರೆ, ಈ ವಿಷಯಕ್ಕೆ ಇನ್ನಷ್ಟಯ ಸಮರ್ಪಕವಾದ ಅಥವಾ ಪ್ರೇಕ್ಷಕರಿಗೆ ಕನ್ವಿನ್ಸ್‌ ಆಗುವಂತಹ ಗಟ್ಟಿಯಾದ ಚಿತ್ರಕಥೆ ಅವಶ್ಯಕತೆ ಇತ್ತು.

ದ್ವಿತೀಯಾರ್ಧದಲ್ಲಿ ಹಲವು ಸರ್ಪ್‌ರೈಸ್‌ಗಳು ರೋಮಾಂಚನಗೊಳಿಸುತ್ತವೆ. ಶತ್ರುಗಳ ಅಖಾಡದಲ್ಲಿ ಎಲ್ಲರ ವಿರುದ್ಧ ಮೃಗದಂತೆ ಹೋರಾಡುವ ಅರ್ಜುನ್‌ ಸರ್ಕಾರ್‌ ಪೂರ್ತಿಯಾಗಿ ರಕ್ತದಲ್ಲಿ ಮಿಂದೇಳುತ್ತಾನೆ. ಆಕ್ಷನ್‌ ದೃಶ್ಯಗಳನ್ನು ನೋಡುವವರಿಗೆ ಇದು ಹಬ್ಬ.

ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನಾನಿ ಈವರೆಗಿನ ಚಿತ್ರಗಳಿಗಿಂತ ಭಿನ್ನವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸೆಕೆಂಡಿಗೆ ಕೋಪಗೊಳ್ಳುವ, ಅನ್ಯಾಯದ ವಿರುದ್ಧ ಯಾವ ಮಟ್ಟಕ್ಕೆ ಬೇಕಾದರೂ ಹೋಗುವ, ಅಪರಾಧಿಗಳನ್ನು ಕೊಚ್ಚಿ ಹಾಕುವ ಪೊಲೀಸ್‌ ಅಧಿಕಾರಿಯಾಗಿ ನಾನಿ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾರೆ. ಹಾಗೆಯೇ ನಾಯಕಿ ಶ್ರೀನಿಧಿ ಶೆಟ್ಟಿ ʼಕೆಜಿಎಫ್‌ʼ ಬಳಿಕ ಗಟ್ಟಿಯಾದ ಪಾತ್ರ ಪಡೆದುಕೊಂಡಿದ್ದಾರೆ. ಹಾಡು, ಡಾನ್ಸು, ಆಕ್ಷನ್‌ ಎಲ್ಲವೂ ಇರುವಂತಹ ಪಾತ್ರಕ್ಕೆ ಶ್ರೀನಿಧಿ ನ್ಯಾಯ ಒದಗಿಸಿದ್ದಾರೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಹಾಗೂ ಸಂಕಲನ ಇಡೀ ಕಥೆಯನ್ನು ಮೇಲೆತ್ತುವ ಕೆಲಸ ಮಾಡಿದೆ. ನಾನಿ ಅಭಿಮಾನಿಗಳಿಗೆ, ಆಕ್ಷನ್‌ ಇಷ್ಟಪಡುವವರಿಗೆ ʼಹಿಟ್‌ 3ʼ ಖಂಡಿತ ಇಷ್ಟವಾಗುತ್ತದೆ.

cinibeat