ಗಂಡುಲಿ ಆಡಿಯೋ ಪ್ರಥಮ್ ಬಿಡುಗಡೆ

 ಗಂಡುಲಿ ಆಡಿಯೋ ಪ್ರಥಮ್ ಬಿಡುಗಡೆ

ಡಾ.ರಾಜ್‌ಕುಮಾರ್ ಅವರ ಬೆಟ್ಟದಹುಲಿ, ಹುಲಿ ಹೆಬ್ಬುಲಿ, ನಂತರ ರಾಜಾಹುಲಿ ಹೀಗೆ ಹುಲಿ ಸರಣಿಯಲ್ಲಿ ಮೂಡಿಬಂದ ಎಲ್ಲಾ ಚಿತ್ರಗಳು ಸೂಪರ್‌ಹಿಟ್ ಆಗಿದ್ದವು, ಈಗ ವಿನಯ್ ರತ್ನಸಿದ್ದಿ ಅವರು ಗಂಡುಲಿ ಎಂಬ ಚಿತ್ರ ಮಾಡಿದ್ದಾರೆ. ಆ ಚಿತ್ರಗಳ ಸಾಲಿಗೆ ಇವರ ಗಂಡುಲಿ ಸಿನಿಮಾ ಕೂಡ ಸೇರುವಂತಾಗಲಿ, ಚಿತ್ರದಲ್ಲಿ ವಿಜಯಪ್ರಕಾಶ್ ಹಾಡಿರುವ ನಿನ್ನ ಓರೆನೋಟ ಹಾಡು ತುಂಬಾ ಚೆನ್ನಾಗಿ ಬಂದಿದೆ. ವಿನಯ್ ನಟ, ನಿರ್ದೇಶಕನಾಗಿ ಏನೋ ಸಾಧನೆ ಮಾಡಲು ಬಂದಿದ್ದಾರೆ. ಅವರಿಗೆ ಒಳ್ಳೇದಾಗಲಿ ಎಂದು ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಹೇಳಿದರು. ಮ್ಯೂಸಿಕ್‌ಬಾಕ್ಸ್ ಹೊರತಂದಿರುವ ಗಂಡುಲಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಥಮ್ ಈ ಆಡಿಯೋ ಕಂಪನಿ ಮಾಡಿರುವ ದಿಲೀಪ್, ಮ್ಯಾಜಿಕ್‌ರಂಗ ನನ್ನ ಸ್ನೇಹಿತರು ಎಂದವರು ಹೇಳಿದರು.


ಈಹಿಂದೆ ಇಂಜಿನಿಯರ್ಸ್ ಚಿತ್ರ ಮಾಡಿದ್ದ ವಿನಯ್ ರತ್ನಸಿದ್ಧಿ ಅವರ ಮತ್ತೊಂದು ಚಿತ್ರ ಇದಾಗಿದ್ದು, ಈ ಚಿತ್ರದ ಆಡಿಯೋ ಹಕ್ಕುಗಳನ್ನು ದಿಲೀಪ್ ಅವರು ಉತ್ತಮಮೊತ್ತ ನೀಡಿ ಖರೀದಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿ ಸುಧಾ ನರಸಿಂಹರಾಜು, ಸಂಗೀತ ನಿರ್ದೇಶಕ ರವಿದೇವ್, ಚಿತ್ರದ ವಿತರಕ ಮರಿಸ್ವಾಮಿ. ಆಡಿಯೋ ಕಂಪನಿಯ ದಿಲೀಪ್ ಹಾಗೂ ಚಿತ್ರತಂಡದ ಇತರರು ಭಾಗವಹಿಸಿದ್ದರು. ವಿನಯ್ ಜೊತೆ ನಾಯಕಿಯಾಗಿ ಛಾಯಾದೇವಿ ನಟಿಸಿದ್ದು, ನಾಯಕನ ತಾಯಿಯ ಪಾತ್ರವನ್ನು ಹಿರಿಯ ಕಲಾವಿದೆ ಸುಧಾ ನರಸಿಂಹರಾಜು ನಿರ್ವಹಿಸಿದ್ದಾರೆ..
ಸುಧಾ ನರಸಿಂಹರಾಜು ಮಾತನಾಡಿ ಡ್ಯುಯೆಟ್ ಹಾಡು ತುಂಬಾ ಖುಷಿ ಕೊಡುತ್ತೆ. ತುಂಬಾ ಕ್ಯಾಚಿ ಟ್ಯೂನ್ ಹೊಂದಿರುವ ಈ ಹಾಡು ಹೊಸವರ್ಷದ ವಿಶೇಷವಾಗಿ ಬಂದಿದೆ. ಇದರ ಜೊತೆಗೆ ಅಮ್ಮ ಮಗನ ಸೆಂಟಿಮೆಂಟ್ ಹಾಡು ಕೂಡ ಚಿತ್ರದಲ್ಲಿದೆ. ಹಿಂದಿನ ಹುಲಿ ಸೀರಿಸ್ ಚಿತ್ರಗಳಂತೆ ಈ ಚಿತ್ರವೂ ಜನರ ಮನ ಗೆಲ್ಲಲಿದೆ. ಹಳ್ಳಿಯ ಪರಿಸರದಲ್ಲಿ ನಡೆಯೋ ಕಥೆಯಿದಾಗಿದ್ದು, ದಿವಾನರ ಕುಟುಂಬದ ಹೆಣ್ಣುಮಗಳಾಗಿ ನಾನು ಕಾಣಿಸಿಕೊಂಡಿದ್ದೇನೆ. ತಾಯಿ ಮಗನ ಸೆಂಟಿಮೆಂಟ್ ಜೊತೆಗೆ ಮನರಂಜನಾತ್ಮಕ ಕಥೆಯೂ ಚಿತ್ರದಲ್ಲಿದೆ ಎಂದು ಹೇಳಿದರು.


ನಂತರ ಮಾತನಾಡಿದ ನಿರ್ದೇಶಕ ಹಾಗೂ ನಾಯಕ ವಿನಯ್ ರತ್ನಸಿದ್ದಿ ಹಾಡುಗಳನ್ನು ಕೇಳಿ ಇಷ್ಟಪಟ್ಟು ದಿಲೀಪ್ ಅವರೇ ನಮ್ಮನ್ನು ಕರೆಸಿಕೊಂಡು ಮಾತಾಡಿದರು. ಒಳ್ಳೇ ಅಮೌಂಟನ್ನು ಸಹ ಕೊಟ್ಟರು. ಅಲ್ಲದೆ ಎಲ್ಲ ರೀತಿಯ ಪ್ರೊಮೋಷನ್ ಸಹ ಮಾಡಿಕೊಡುವುದಾಗಿ ಹೇಳಿದ್ದಾರೆ. ವಿತರಕ ಮರಿಸ್ವಾಮಿಯವರು ಎಲ್ಲಾ ಕಡೆ ಒಳ್ಳೇ ಥೇಟರ್‌ಗಳನ್ನು ಮಾಡಿಕೊಡುತ್ತಿದ್ದಾರೆ. ನಾವು ೨೦-೩೦ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡೋಣ ಎಂದುಕೊಂಡಿದ್ದೆವು, ಆದರೆ ಅವರು ೫೦ಕ್ಕೂ ಹೆಚ್ಚು ಥೇಟರ್‌ಗಳನ್ನು ಕೊಡಿಸುತ್ತಿದ್ದಾರೆ. ನಮ್ಮ ಚಿತ್ರಕ್ಕೆ ಎಲ್ಲ ರೀತಿಯಿಂದ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿದೆ. ಊರಿನ ದೇವಸ್ಥಾನದ ಕುರಿತು ಪುರಾತತ್ವ ಇಲಾಖೆಯಿಂದ ಸರ್ವೆ ಮಾಡಲು ಬಂದವರು ಹಾಗೇ ಕೊಲೆಯಾಗ್ತಾರೆ. ಅವರು ಏಕೆ ಕೊಲೆಯಾದರು, ಅದರ ಹಿಂದಿರುವ ಕಾರಣವೇನು ಎಂಬುದನ್ನು ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಈ ಚಿತ್ರದಲ್ಲಿ ಹೇಳಿದ್ದೇನೆ. ಚಿತ್ರದ ೩ ವಿಭಿನ್ನ ಶೈಲಿಯ ಹಾಡುಗಳಿಗೆ ರವಿದೇವ್ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ಹೇಳಿದರು. ಚಿತ್ರದ ನಾಯಕಿ ಛಾಯಾದೇವಿ ಒಬ್ಬ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ, ರಾಜು ಶಿವಶಂಕರ್ ಮತ್ತು ಶ್ಯಾಮ್ ಅವರ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಅವರ ಸಂಕಲನ, ಸುರೇಶ್ ಅವರ ಸಾಹಸವಿದೆ. ಉಳಿದ ತಾರಾಬಳಗದಲ್ಲಿ ಧರ್ಮೇಂದ್ರ ಅರಸ್, ಸುಬ್ಬೇಗೌಡ್ರು, ರಾಮಣ್ಣ, ರಂಜಿತ್, ಪುನೀತ್ ಮುಂತಾದವರು ಅಭಿನಯಿಸಿದ್ದಾರೆ. ಅಮರೇಂದ್ರ, ಪುನೀತ್,ಲೋಕೆಶ್ ರಾಜಣ್ಣ ಹಾಗೂ ಚಂದನ ಸೇರಿ ೪ ಜನ ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

cinibeat

Leave a Reply

Your email address will not be published. Required fields are marked *