ಕಿರುಚಿತ್ರಗಳತ್ತ ಹೆಸರಾಂತ ಛಾಯಾಗ್ರಾಹಕ ಸತ್ಯ ಹೆಗ್ಡೆ ಚಿತ್ತ!
ಅಭಿಷೇಕ್ ಕಾಸರಗೋಡು ನಿರ್ದೇಶನದ “ಪಪ್ಪೆಟ್ಸ್” ಹಾಗೂ ಮಂಸೋರೆ ನಿರ್ದೇಶನದ “ದಿ ಕ್ರಿಟಿಕ್” ಹತ್ತು ನಿಮಿಷ ಅವಧಿಯ ಈ ಎರಡು ಕಿರುಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಕಳೆದ ಇಪ್ಪತ್ತಾರು ವರ್ಷಗಳಿಂದ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸತ್ಯ ಹೆಗಡೆ ಈ ಕಿರುಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿದ್ದಾರೆ.
ಮೊದಲು ಅಭಿಷೇಕ್ ಕಾಸರಗೋಡು ನಿರ್ದೇಶನದ “ಪಪ್ಪೆಟ್ಸ್” ಕಿರುಚಿತ್ರದ ಪ್ರದರ್ಶನ ನಡೆಯಿತು. ಗೌತಮಿ ಜಾಧವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
.
ನನಗೆ ಅವಕಾಶ ನೀಡಿದ ಸತ್ಯ ಹೆಗಡೆ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನಾನು ಈ ಕಿರುಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ತೋರಿಸಿದ್ದೆ. ಚನ್ನಾಗಿದೆ ಎಂದು ಪೋಸ್ಟರ್ ಮೇಲೆ ಸಹಿ ಮಾಡಿ ಕೊಟ್ಟಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಗೌತಮಿ ಜಾಧವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಅಭಿಷೇಕ್ ಕಾಸರಗೋಡು.
ನಟಿಯೊಬ್ಬಳು ಸೇಲ್ಸ್ ಗರ್ಲ್ ಒಬ್ಬಳಿಂದ ಪ್ರಭಾವಿತಳಾಗುವ ಪಾತ್ರ ನನ್ನದು. ಅಭಿಷೇಕ್ ಅವರು ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಉತ್ತಮ ವೇದಿಕೆ ಕಲ್ಪಿಸಿಕೊಟ್ಟ ಸತ್ಯ ಹೆಗಡೆ ಸರ್ ಅವರಿಗೆ ಧನ್ಯವಾದ ಎಂದರು ನಟಿ ಗೌತಮಿ ಜಾಧವ್ .
ನಂತರ ಮಂಸೋರೆ ನಿರ್ದೇಶನದಲ್ಲಿ ನಿರ್ದೇಶಕ ಮತ್ತು ನಟ ಟಿ.ಎಸ್ ನಾಗಾಭರಣ ಹಾಗೂ ವೈ.ಜಿ.ಉಮ ನಟಿಸಿರುವ “ದಿ ಕ್ರಿಟಿಕ್” ಕಿರುಚಿತ್ರದ ಪ್ರದರ್ಶನವಾಯಿತು.
ಕಳೆದ ಲಾಕ್ ಡೌನ್ ಸಮಯದಲ್ಲಿ ಮಾಡಿದ ಕಿರುಚಿತ್ರವಿದು. ಸಂಚಾರಿ ವಿಜಯ್ ಸಾವಿನಿಂದ ಡಿಪ್ರೆಶನ್ ಗೆ ಹೋಗಿದ್ದ ನನಗೆ, ಸತ್ಯ ಹೆಗಡೆ ಕಿರುಚಿತ್ರ ಮಾಡಲು ಪ್ರೇರೇಪಿಸಿದರು. ಬಶೀರ್ ಅವರ ಕಥೆಯಿದು. ನಂತರ ಚಿತ್ರೀಕರಣಕ್ಕೆ ಮುಂದಾದೆ. ಬಕೇಶ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣ ಮಾಡಿದ್ದಾರೆ. ವೀರೇಂದ್ರ ಮಲ್ಲಣ್ಣ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ಶ್ರೀನಿವಾಸ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಕಿರುಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎನ್ನುತ್ತಾರೆ ಮಂಸೋರೆ.
ಕೊರೋನದ ಈ ಕಾಲಘಟ್ಟದಲ್ಲಿ ಒಬ್ಬರನೊಬ್ಬರು ಭೇಟಿಯಾಗುವುದೇ ವಿರಳವಾಗಿದೆ. ಸಿನಿಮಾವನ್ನೇ ಉಸಿರೆಂದು ಜೀವಿಸುತ್ತಿರುವ ಎಷ್ಟೋ ಮನಸ್ಸುಗಳನ್ನು ಇಂದು ನೋಡುವ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಮೊದಲು ಧನ್ಯವಾದ. ಪ್ರದರ್ಶನವಾದ ಎರಡು ಕಿರುಚಿತ್ರಗಳು ಚೆನ್ನಾಗಿದೆ. ಕಡಿಮೆ ಅವಧಿಯಲ್ಲಿ ದೊಡ್ಡ ವಿಷಯ ಹೇಳುವ ಪ್ರಯತ್ನ ಇಬ್ಬರೂ ಯುವ ನಿರ್ದೇಶಕರು ಮಾಡಿದ್ದಾರೆ. ಮಂಸೋರೆ ನನ್ನನ್ನು ಭೇಟಿಯಾಗಲು ಬಂದಾಗ ನಿಮ್ಮ ಆಫೀಸ್ ನಲ್ಲಿ ಚಿತ್ರೀಕರಣ ಎಂದರು. ಆ ನಂತರ ಮಂಡ್ಯದ ಬಳಿಯ ಅಂಕೇಗೌಡರ ಜ್ಞಾನ ಪ್ರತಿಷ್ಠಾನದಲ್ಲಿ ಎಂದಾಗ ಸಂತೋಷವಾಯಿತು. ಎರಡು ತಂಡಕ್ಕೂ ಒಳ್ಳೆಯದಾಗಲಿ ಎಂದರು ನಾಗಾಭರಣ.
ಉಮ ಅವರು ಸಹ ತಮ್ಮ ಅಭಿನಯದ ಅನುಭವ ಹಂಚಿಕೊಂಡರು.
ಸ್ಮಾಲ್ ಇಸ್ ಬ್ಯೂಟಿ ಫುಲ್ ಎಂಬ ಮಾತಿದೆ. ಅಂದರೆ ಚಿಕ್ಕದು ತುಂಬಾ ಸುಂದರವಾಗಿರುತ್ತದೆ ಅಂತ. ಆ ದೃಷ್ಟಿಯಲ್ಲಿ ಈ ಎರಡು ಚಿತ್ರಗಳು ಸುಂದರವಾಗೂ ಇದೆ. ಅರ್ಥಪೂರ್ಣವಾಗಿಯೂ ಇದೆ. ಎರಡು ತಂಡಕ್ಕೂ ಶುಭವಾಗಲಿ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹಾರೈಸಿದರು. ನಿರ್ದೇಶಕ ನಾಗಶೇಖರ್ ಹಾಗೂ ನಟ ಶ್ರೀನಗರ ಕಿಟ್ಟಿ ಶುಭ ಕೋರಿದರು.
ಪ್ರತಿಭಾವಂತ ಹೊಸ ತಂಡಕ್ಕೆ ನಮ್ಮ ಸತ್ಯ ಸ್ಟುಡಿಯೋಸ್ ಮೂಲಕ ವೇದಿಕೆ ಕಲ್ಪಿಸಿಕೊಡುತ್ತೇವೆ. ಆಸಕ್ತಿಯಿರುವವರು ನಮ್ಮನ್ನು ಸಂಪರ್ಕಿಸಬಹುದು. ಪ್ರತಿ ತಿಂಗಳ ಎರಡನೇ ಭಾನುವಾರ ಒಂದು ಕಿರುಚಿತ್ರ ಪ್ರದರ್ಶನ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ ಸತ್ಯ ಹೆಗಡೆ, ಆಗಮಿಸಿದ ಗಣ್ಯರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.