ಸತ್ಯಪ್ರಕಾಶ್ ಸಾರಥ್ಯದಲ್ಲಿ ಆರಂಭವಾಯಿತು “ಸತ್ಯ ಸಿನಿ Distributions”

 ಸತ್ಯಪ್ರಕಾಶ್ ಸಾರಥ್ಯದಲ್ಲಿ ಆರಂಭವಾಯಿತು “ಸತ್ಯ ಸಿನಿ Distributions”

ಉದ್ಘಾಟಿಸಿ ಶುಭಕೋರಿದ ಡಾಲಿ ಧನಂಜಯ

“ರಾಮಾ ರಾಮಾ ರೇ” ಚಿತ್ರದ ಮೂಲಕ ಮನೆಮಾತಾಗಿರುವ ಸತ್ಯಪ್ರಕಾಶ್, ತಮ್ಮ ಸ್ನೇಹಿತರ ಬಳಗದೊಂದಿಗೆ ಸೇರಿ ಸತ್ಯ ಪಿಕ್ಚರ್ಸ್ ಎಂಬ ಸಂಸ್ಥೆ ಆರಂಭಿಸಿದ್ದರು. ಈಗ ಇದರ ಮುಂದಿನ ಹೆಜ್ಜೆಯಾಗಿ “ಸತ್ಯ ಸಿನಿ Distributions” ಎಂಬ ಸಂಸ್ಥೆ ಆರಂಭಿಸಿದ್ದಾರೆ. ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ದೀಪಕ್ ಗಂಗಾಧರ್, ಮಂಜುನಾಥ್. ಡಿ ಹಾಗೂ ಸತ್ಯ ಪಿಕ್ಚರ್ಸ್ ತಂಡದವರು ಈ‌ ಹೊಸ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ.

ನಾನು ಇಲ್ಲಿಗೆ “ಜಯನಗರ 4th ಬ್ಲಾಕ್” ಕಿರುಚಿತ್ರದಲ್ಲಿ ಅಭಿನಯಿಸಿದ್ದ ಧನಂಜಯನಾಗಿಯೇ ಬಂದಿದ್ದೀನಿ. ಯಾವುದೇ ಸೂಪರ್ ಸ್ಟಾರ್ ಆಗಿ ಬಂದಿಲ್ಲ. ಸತ್ಯಪ್ರಕಾಶ್ ಹೇಳುತ್ತಿದ್ದರು, “ರಾಮಾ ರಾಮಾ ರೇ” ಮಾಡಿದ್ದಾಗ ಡಿಮಾನಿಟೈಸೇಶನ್ ಆಯ್ತು ಅಂತ. ನಾವು ಹಾಗೆ ತಿಳಿದುಕೊಳ್ಳಬಾರದು. ನಾವು ಬಂದಾಗಲೆಲ್ಲ ಹೊಸ ಅಲೆ ಏಳುತ್ತದೆ ಅಂದುಕೊಳ್ಳಬೇಕು.‌ ನನ್ನ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರ ಬಿಡುಗಡೆಯಾದಾಗ ಮೊದಲ‌ ಅಲೆ ಬಂತು.‌ “ಯುವರತ್ನ” ಬಂದಾಗ ಎರಡನೇ ಅಲೆ‌ ಈಗ “ಬಡವ ರಾಸ್ಕಲ್” ಬಂದಿದೆ. ಈಗ ಮೂರನೇ ಅಲೆ ಶುರುವಾಗಿದೆ ಎಂದ ಡಾಲಿ, ಸತ್ಯಪ್ರಕಾಶ್ ಹಾಗೂ ತಂಡಕ್ಕೆ ಶುಭ ಕೋರಿದರು.

ನನ್ನ ಬಳಿ ಹೆಚ್ಚು ದುಡ್ಡಿಲ್ಲ. ನಾನು ಮೂಲತಃ ಬರಹಗಾರ ನಿರ್ದೇಶಕ ಅಷ್ಟೇ. ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಪ್ರಕಾಶ್ ಪಾಂಡೇಶ್ವರ್ ಅವರನ್ನು ಭೇಟಿಯಾದಾಗ ವಿತರಣೆಯ ಬಗ್ಗೆ ಹೇಳಿದರು. ವಿತರಣಾ ಸಂಸ್ಥೆ ಆರಂಭಿಸಬೇಕೆಂಬ ಆಸೆಯಿತ್ತು. ಅದಕ್ಕೆ ಮೂಲ ಕಾರಣ ನನ್ನ ಹಿಂದಿನ ಸಿನಿಮಾಗಳಲ್ಲಿ ಇದರ ಬಗ್ಗೆ ತಿಳಿಯದೆ, ಒದ್ದಾಡಿದ್ದು. ನಂತರ ನಮ್ಮೊಂದಿಗೆ ದೀಪಕ್ ಗಂಗಾಧರ್ ಹಾಗೂ ಮಂಜುನಾಥ್ ಡಿ ಸೇರಿದರು. ಎಲ್ಲರೂ ಸೇರಿ ಈ ಸಂಸ್ಥೆ ಆರಂಭಿಸಿದ್ದೇವೆ. ಇದು ಎಲ್ಲರಿಗೂ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೊಂದರಂತೆ ನೂರು ಅಥವಾ ನೂರೈವತ್ತು ಆಸನವುಳ್ಳ ಚಿತ್ರಮಂದಿರ ಆರಂಭಿಸುವ ಯೋಚನೆಯಿದೆ. ಲಾಕ್ ಡೌನ್ ಮುಂಚಿನ ಸಿನಿಮಾ ರಂಗವೇ ಬೇರೆ. ಈಗಲೇ ಬೇರೆ.. ಲಾಕ್ ಡೌನ್ ನಂತರ ಸಿನಿಮಾ ಎನ್ನುವುದು ನಿಮ್ಮ ಮೊಬೈಲ್ ನಲ್ಲಿ ಲಭ್ಯವಿದೆ. ಈಗ ಪೈಪೋಟಿ ಜಾಸ್ತಿಯಾಗಿದೆ. ಜನ ಮೆಚ್ಚುವ ಚಿತ್ರಗಳನ್ನು ನೀಡುವ ಜವಾಬ್ದಾರಿ ಹೆಚ್ಚಿದೆ ಎಂದ ಸತ್ಯಪ್ರಕಾಶ್ ಅವರು
ಸಂಸ್ಥೆ ಉದ್ಘಾಟಿಸಿದ ಧನಂಜಯ ಅವರಿಗೆ ಹಾಗೂ ಹಾರೈಸಲು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ ತಿಳಿಸಿದರು.

ಸಿನಿಮಾ ನಿರ್ಮಿಸಿ , ವಿತರಣೆ ಹೇಗೆ ಮಾಡಬೇಕೆಂದು ತಿಳಿಯದ ಹೊಸ ತಂಡದವರು ನಮ್ಮ ಸಂಸ್ಥೆಯ ಮೂಲಕ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಬಹುದು ಮತ್ತು ರಾಜ್ಯಾದ್ಯಂತ ನಡೆಸಲಾಗದ್ದ ಸ್ಥಿತಿಯಲ್ಲಿರುವ ಸಿಂಗಲ್ ಥಿಯೇಟರ್ ಗಳನ್ನು ಲೀಸ್ ಗೆ ಹಾಕಿಕೊಳ್ಳುವ ಯೋಚನೆ ಸಹ ನಮಗಿದೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್.

ಮೊದಲ ಪ್ರತಿ ಸಿದ್ದವಾಗುವ ತನಕ ಸಿನಿಮಾ ಆಗುವುದೇ ಗೊತ್ತಾಗುವುದಿಲ್ಲ. ಆಮೇಲೆ ಚಿತ್ರವನ್ನು ತೆರೆಗೆ ತರುವುದು ಇದೆಯಲ್ಲಾ ಅದೇ ದೊಡ್ಡ ಸಾಹಸ. ಈಗ ಲಾಕ್ ಡೌನ್ ನಂತರ ಬಿಡುಗಡೆಗೆ ಸಿದ್ದವಾಗಿರುವ ಎಷ್ಟೋ ಚಿತ್ರಗಳನ್ನು ಹೇಗೆ ಬಿಡುಗಡೆ ಮಾಡುವುದು ಎಂದು ತಿಳಿದವರಿದ್ದಾರೆ. ಅಂತಹವರು ನಮ್ಮ ಸಂಸ್ಥೆಯ ಮೂಲಕ ಸದುಪಯೋಗ ಪಡೆದುಕೊಳ್ಳಬಹುದು ಎಂದರು ನಿರ್ಮಾಪಕ ಮಂಜುನಾಥ್ ಡಿ.

ಕನ್ನಡ ಚಿತ್ರರಂಗದ ಸಾಕಷ್ಟು ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

cinibeat

Leave a Reply

Your email address will not be published. Required fields are marked *