ಪುಣ್ಯಪಾದದ ಕೈ ಹಿಡಿದ ರೋರಿಂಗ್‌ ಸ್ಟಾರ್‌..!

 ಪುಣ್ಯಪಾದದ ಕೈ ಹಿಡಿದ ರೋರಿಂಗ್‌ ಸ್ಟಾರ್‌..!

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ “ಈ ಪಾದ ಪುಣ್ಯಪಾದ” ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ .

ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರದ
ಖ್ಯಾತಿಯ ನಿರ್ದೇಶಕರಾದ ಸಿದ್ದು ಪೂರ್ಣಚಂದ್ರರವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮತ್ತೊಂದು ಚಿತ್ರ”ಈ ಪಾದ ಪುಣ್ಯಪಾದ”.ಇತ್ತೀಚಿಗೆ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಇದೊಂದು ಆನೆ ಕಾಲು ರೋಗಿಯ ಕಥೆಯಾಧಾರಿತ ಚಿತ್ರವಾಗಿರುವುದರಿಂದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಕೂಡ ಹೊಸ ಆಯಾಮದಲ್ಲಿ ಈ ಚಿತ್ರ ಪರಿಣಾಮ ಬೀರಬಹುದು ಎಂಬುದು ನಿರ್ದೇಶಕರ ಆಶಯ. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯ ಖಾಯಿಲೆಗಳು ಸಂಭವಿಸಿದಾಗ ಆ ರೋಗಕ್ಕಿಂತ ಮಾನಸಿಕವಾಗಿಯೇ ಯಾತನೆ ಪಡುವುದು ಜಾಸ್ತಿ ಆಗಿರುತ್ತದೆ. ಯಾವುದೇ ರೋಗ ಬಂದರೂ ಕೂಡ ನಾವು ಎದೆಗುಂದದೆ ತಾಳ್ಮೆಯಿಂದ ಅದನ್ನು ಎದುರಿಸಬೇಕು ಎಂಬುದೇ ಈ ಚಿತ್ರದ ಕಥೆಯಾಗಿದೆ. ಈ ಕಥೆಯನ್ನು ಹಲವು ವರ್ಷಗಳಿಂದ ಅಧ್ಯಯನ ಮಾಡಿ ಒಂದು ಚಿತ್ರಕಥೆಯ ರೂಪು ರೇಷೆಗಳನ್ನು ಸಿದ್ಧಪಡಿಸಿ ಆನಂತರ ಇದನ್ನು ಚಿತ್ರವಾಗಿಸಿದ್ದಾರೆ. ಯಾವುದೇ ರೋಗ ಬಂದಿರುವ ವ್ಯಕ್ತಿಯನ್ನು ಯಾವ ರೀತಿ ಪ್ರೀತಿಯಿಂದ ನೋಡಿಕೊಳ್ಳಬೇಕು, ಸಾಂತ್ವನ ಹೇಳಬೇಕು ಎಂಬುದು ಈ ಚಿತ್ರದ ಮುಖಾಂತರ ಕಾಣಿಸುತ್ತದೆ. ಜೊತೆಗೆ ಸಾಮಾಜಿಕ ಪರಿಣಾಮ ಬೀರುವಂತಹ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗಿರುವುದರಿಂದ ಇಂತಹ ಚಿತ್ರಕ್ಕೆ ಪ್ರೋತ್ಸಾಹ ಕೊಡಬೇಕೆಂಬುದು ಇಡೀ ಚಿತ್ರತಂಡದ ಆಶಯ ಆಗಿದೆ.

ಆ ಕಾರಣಕ್ಕಾಗಿಯೇ ಶ್ರೀಮುರಳಿ ಅವರು ಈ ನಿಟ್ಟಿನಲ್ಲಾದರೂ ಹೊಸಬರಿಗೆ ಪ್ರೋತ್ಸಾಹ ನೀಡಬೇಕು ಹೊಸಬರಿಗೆ ದಾರಿಯಾಗಬೇಕು. ಹಾಗಾಗಿ ನಾನು ಈ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸುತ್ತಾ ಇದ್ದೀನಿ. ನೀವು ಕೂಡ ಈ ಚಿತ್ರವನ್ನು ನೋಡಬೇಕು ಅನ್ನುವ ಅವರ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಈ ಚಿತ್ರಕ್ಕೆ ನಾಯಕ ನಟರಾಗಿ ಆಟೋ ನಾಗರಾಜ್ ರವರು ಈ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಹಿಂದೆ ಅವರು ಆಟೋ ಪ್ರಮೋಷನ್ ಅನ್ನು ಕಳೆದ 18 ವರ್ಷಗಳಿಂದಲೂ ಮಾಡಿದಂತವರು, ಅವರು ಮೊದಲ ಬಾರಿಗೆ ನಾಯಕ ನಟರಾಗಿ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ನಂತರ ರಶ್ಮಿ, ಚೈತ್ರ, ಪ್ರಮೀಳಾ ಸುಬ್ರಹ್ಮಣ್ಯ, ಮನೋಜ್, ಹರೀಶ್ ಕುಂದೂರು, ಬೇಬಿ ರಿದಿ, ಪವಿತ್ರ, ಬಾಲರಾಜ್ ವಾಡಿ, ರೋಹಿಣಿ, ಶಂಕರ್ ಭಟ್, ಪ್ರೀತಿ, ಮೀಸೆ ಮೂರ್ತಿ ಇನ್ನೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಅನಂತ ಆರ್ಯನ್ ರವರು ನೀಡಿದ್ದಾರೆ. ಕಲೆ ಬಸವರಾಜ್ ಆಚಾರ್, ವಸ್ತ್ರಲಂಕಾರ ನಾಗರತ್ನ ಕೆ ಎಚ್, ಶಬ್ದ ವಿನ್ಯಾಸ ಶ್ರೀರಾಮ್, ಕಲರಿಂಗ್ ಗಗನ್ ಆರ್, ಸಂಕಲನ ದೀಪು ಸಿ ಎಸ್ ನಿರ್ವಹಿಸಿದ್ದಾರೆ. ಈ ಚಿತ್ರ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಪಡೆದಿದೆ. ಈ ಚಿತ್ರವು ಹಲವಾರು ಚಲನಚಿತ್ರೋತ್ಸವಗಳಿಗೆ ಸ್ಪರ್ಧಿಸಲು ರೆಡಿಯಾಗಿದೆ.

cinibeat