ಅಂದುಕೊಂಡಿದ್ದಕ್ಕಿಂತ ಮೊದಲೇ ಮುಗಿಯಿತು “ವೆಡ್ಡಿಂಗ್ ಗಿಫ್ಟ್” ಚಿತ್ರದ ಚಿತ್ರೀಕರಣ.
ಒಂದು ಚಿತ್ರದ ಚಿತ್ರೀಕರಣ ಅಂದುಕೊಂಡ ಹಾಗೆ ಮುಗಿದರೆ, ಅರ್ಧ ಸಿನಿಮಾ ಮುಗಿದ ಹಾಗೆ ಎನ್ನುತ್ತಾರೆ.
ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಚಿತ್ರೀಕರಣ ನಿಗದಿಗಿಂತ ಒಂದು ದಿನ ಮುಂಚಿತಾವಾಗಿಯೇ ಮುಗಿದಿದೆ. ಈ ಸಂತಸವನ್ನು ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ನಾನು ಮೂಲತಃ ಮಂಗಳೂರಿನವನು. ಈಗ ಪುಣೆ ವಾಸಿ. ಹದಿನೆಂಟು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರಕ್ಕೆ ಕೆಲಸ ಮಾಡಿದ್ದೆ. ಆನಂತರ ಚಿತ್ರರಂಗದಿಂದ ದೂರವಾಗಿದೆ. ಈಗ ಮತ್ತೆ ಬಂದಿದ್ದೀನಿ. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ. ನಮ್ಮ ಪ್ರಕಾರ ಡಿಸೆಂಬರ್ 31ರಂದು ಚಿತ್ರೀಕರಣ ಪೂರ್ಣವಾಗಬೇಕಿತ್ತು. ಒಂದು ದಿನ ಮೊದಲೇ 30 ರಂದೇ ಚಿತ್ರೀಕರಣ ಮುಗಿದಿದೆ. ಬೆಂಗಳೂರು, ತುಮಕೂರು, ಉಡುಪಿ, ಮಂಗಳೂರು ಮುಂತಾದಕಡೆ ಮೂವತ್ತೇಳು ದಿನಗಳ ಚಿತ್ರೀಕರಣ ನಡೆದಿದೆ. ಗಂಡ-ಹೆಂಡತಿ ನಡುವೆ ನಡೆಯುವ ಕಥಾಹಂದರ. ಸಕ್ಷನ್ 498 ಸಂಬಂಧಿಸಿದ ಕೆಲವು ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ. ಗಂಡ – ಹೆಂಡತಿ ಕೊನೆಗೆ ಒಂದಾಗುತ್ತಾರಾ? ಇಲ್ಲವಾ? ಎಂಬುದನ್ನು ಚಿತ್ರದಲ್ಲಿ ನೋಡಬೇಕು. ನಿಶಾನ್ ನಾಣಯ್ಯ – ಸೋನುಗೌಡ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಲಾಯರ್ ಪಾತ್ರದಲ್ಲಿ ಓಂ ಖ್ಯಾತಿ ಪ್ರೇಮ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಪವಿತ್ರಲೋಕೇಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಏಪ್ರಿಲ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ – ನಿರ್ದೇಶಕ ವಿಕ್ರಂಪ್ರಭು.
ಕಥೆ ಕೇಳಿ ವಿಭಿನ್ನ ಅನಿಸಿತು. ಮೊದಲ ಸಲ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಪಾತ್ರ ಚೆನ್ನಾಗಿದ್ದರಷ್ಟೆ ಒಪ್ಪಿಕೊಳ್ಳುವುದು. ಈ ಚಿತ್ರದ ಕಥೆ ಬಗ್ಗೆ ಒಂದೆಳೆ ಹೇಳಿದರೂ, ಪೂರ್ತಿ ಹೇಳಿದಂತೆ. ಉತ್ತಮ ಸಂದೇಶವಿರುವ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು ನಟಿ ಪ್ರೇಮ.
ಪತ್ರಕರ್ತ ಶೆಣೈ ಅವರಿಂದ ನನಗೆ ಈ ಚಿತ್ರತಂಡ ಪರಿಚಯವಾಯಿತು. ನಾನು ಚಿತ್ರೀಕರಣ ಮುಗಿಸಿ ಬಂದ ಮೇಲೆ ರಾತ್ರಿ ಕೊರಗುತ್ತಿದೆ. ನಾನು ಮಾಡಿದ್ದು, ಸರಿನಾ? ತಪ್ಪಾ? ಅಂತ ಯೋಚಿಸುತ್ತಿದ್ದೆ. ನನ್ನ ತಂಗಿ ಇದ್ದನ್ನು ಸರಿ ಮಾಡಿದ್ದಳು. ನೀನು ಚಿತ್ರದ ಪಾತ್ರಗಳನ್ನು ಚಿತ್ರೀಕರಣ ಮುಗಿಯುತ್ತಿದ್ದ ಹಾಗೆ ಅಲ್ಲೇ ಬಿಟ್ಟುಬಿಡಬೇಕು. ಮನೆಗೆ ಬಂದ ಮೇಲೆ ನೀನು ಸೋನು ಗೌಡ ಆಗಿಯೇ ಇರಬೇಕು ಎಂದಳು. ಈಗ ಹಾಗೆ ಮಾಡುತ್ತಿದ್ದೇನೆ. ನಾನು ಈವರೆಗೂ ಇಂತಹ ಪಾತ್ರ ಮಾಡಿಲ್ಲ ಅನ್ನಬಹುದು. ಆಕಾಂಕ್ಷ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನೊಂದ ಮನಸ್ಸುಗಳಿಗೆ ಹತ್ತಿರವಾಗುವ ಪಾತ್ರ ನನ್ನದು. ಉತ್ತಮ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ವಿಕ್ರಂಪ್ರಭು ಅವರಿಗೆ ಧನ್ಯವಾದ ಎಂದರು ಸೋನು ಗೌಡ.
ನಾಯಕ ನಿಶಾನ್ ನಾಣಯ್ಯ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು. ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಛಾಯಾಗ್ರಹಕ ಉದಯಲೀಲ ಹಾಗೂ ಸಂಕಲನಕಾರ ವಿಜೇತ್ ಚಂದ್ರ ತಮ್ಮ ಕಾರ್ಯಗಳ ಬಗ್ಗೆ ಮಾತನಾಡಿದರು.