“ನೇತ್ರಂ” ಮೂಲಕ ಸ್ಯಾಂಡಲ್ವುಡ್ ಗೆ ಹೊಸ ಹೀರೋ ದಕ್ಷ್ ಎಂಟ್ರಿ !

 “ನೇತ್ರಂ”  ಮೂಲಕ ಸ್ಯಾಂಡಲ್ವುಡ್ ಗೆ ಹೊಸ ಹೀರೋ ದಕ್ಷ್ ಎಂಟ್ರಿ !

ಪ್ರತಿ ವಾರ ಸ್ಟಾರ್ ನಟರ ಸಿನಿಮಾದಿಂದ ಹಿಡಿದು ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕೋವಿಡ್​​​ನಂತ ಕಷ್ಟದ ಪರಿಸ್ಥಿತಿಯಲ್ಲೂ ಹೊಸ ಸಿನಿಮಾ ಮುಹೂರ್ತ, ಆಡಿಯೋ, ಪ್ರೀ ರಿಲೀಸ್ ಕಾರ್ಯಕ್ರಮ, ಪೋಸ್ಟರ್, ಟ್ರೇಲರ್ ರಿಲೀಸ್​​ ಕಾರ್ಯಗಳು ಸಾಗುತ್ತಿವೆ. ಮೊದಲೆಲ್ಲಾ ಗಾಂಧಿನಗರದಲ್ಲಿ ಹೊಸಬರ ಸಿನಿಮಾಗಳೆಂದರೆ ಸ್ವಲ್ಪ ಹಿಂಜರಿಕೆ ಇತ್ತು. ಆದರೆ ಈಗ ಚಿತ್ರರಂಗ ಮೊದಲಿನಂತಲ್ಲ. ನಿರ್ಮಾಪಕ, ನಿರ್ದೇಶಕರು ಹೊಸ ಮುಖಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಜನರು ಕೂಡಾ ಹೊಸಬರ ಚಿತ್ರಗಳನ್ನು ನೋಡಿ ಬೆನ್ನು ತಟ್ಟುತ್ತಿದ್ದಾರೆ.  ಈಗ  ದಕ್ಷ್​ ಎಂಬ ಮತ್ತೊಬ್ಬ ಸ್ಪುರದ್ರೂಪಿ ನಟ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ದಕ್ಷ್​ ಅವರ ಮೊದಲ ಹೆಸರು ದರ್ಶನ್.  ಈಗ ದಕ್ಷ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಗದಗ ಮೂಲದ ದಕ್ಷ್ ‘ನೇತ್ರಂ’ ಚಿತ್ರದ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಹೊಸ ಹುಡುಗನಿಗೆ ಸಿನಿಪ್ರಿಯರು ಸ್ವಾಗತ ಕೋರಿದ್ದಾರೆ. ಇತ್ತೀಚೆಗೆ ‘ನೇತ್ರಂ’ ಟೀಸರ್ ಕೂಡಾ ಬಿಡುಗಡೆಯಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ರೌಡಿಗಳ ಬಳಿ ಸಿಲುಕಿರುವ ನಾಯಕಿಯನ್ನು ಕಾಪಾಡಲು ಹೀರೋ ಎಂಟ್ರಿ ಕೊಡುವ ದೃಶ್ಯಗಳನ್ನು ಈ ಟೀಸರ್​​​​ನಲ್ಲಿ ತೋರಿಸಲಾಗಿದೆ. ಈ ಟೀಸರ್ ನಲ್ಲಿರುವ ಸಂಭಾಷಣೆ ಬಗ್ಗೆ ಸಾಕಷ್ಟು  ಚರ್ಚೆಯಾಗುತ್ತಿದೆ.

‘ನೇತ್ರಂ’ ಸಿನಿಮಾ ಕನ್ನಡ-ತೆಲುಗು ಎರಡೂ ಭಾಷೆಗಳಲ್ಲೂ ತಯಾರಾಗುತ್ತಿದ್ದು ಜಯಸೂರ್ಯ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೊಕ್ತುಮ್ ಪಟೇಲ್ , ಶಾಯಿಕ್ ಶಬೀರ್ ಅಬ್ಬು ಹಾಗೂ ಬಿಳ್ಳೂರ್ ಸುರೇಶ್  ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಬಿಳ್ಳೂರು ಸುರೇಶ್, ‘ನೇತ್ರಂ’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು  ನಿರ್ದೇಶನ ಮಾಡಿದ್ದಾರೆ. ದಕ್ಷ್ ಜೊತೆಗೆ ಶೀಲಾ, ತೇಜಸ್ವಿನಿ, ಧನಶ್ರೀ, ಮುದಾಸೀರ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ವೆಂಕಟೇಶ್ ಯುಡಿವಿ ಸಂಕಲನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚೈತನ್ಯ ರಾಜ ಸಂಗೀತ  ನೀಡಿರುವ ಚಿತ್ರದ ಎಲ್ಲಾ ಹಾಡುಗಳು ಸಂಗೀತಪ್ರಿಯರಿಗೆ ಇಷ್ಟವಾಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ವೈಜೆಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶೀಘ್ರದಲ್ಲಿ ಸಿನಿಮಾದ ಹಾಡುಗಳನ್ನು ಚಿತ್ರತಂಡ ಹೊರತರಲಿದೆ. ಜೊತೆಗೆ ಕನ್ನಡ, ತೆಲುಗು, ತಮಿಳು ಸೇರಿದಂತೆ 500 ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಫೈಟ್ ಮಾಸ್ಟರ್ ಕುಂಫ್ಫು ಚಂದ್ರು ಈ ಚಿತ್ರಕ್ಕೆ ಸ್ಟಂಟ್ ಕೊರಿಯೋಗ್ರಫಿ ಮಾಡಿರುವುದು ಸಿನಿಮಾದ ಪ್ಲಸ್ ಪಾಯಿಂಟ್ ಎನ್ನಲಾಗಿದೆ.

cinibeat