ಅಗ್ರಸೇನಾ ಟೀಸರ್​ ಅಬ್ಬರ – ಮುರುಗೇಶ್​ ನಿರ್ದೇಶನದ ಫ್ಯಾಮಿಲಿ ಡ್ರಾಮಾ

 ಅಗ್ರಸೇನಾ ಟೀಸರ್​ ಅಬ್ಬರ – ಮುರುಗೇಶ್​ ನಿರ್ದೇಶನದ ಫ್ಯಾಮಿಲಿ ಡ್ರಾಮಾ

ಶ್ರೀಮತಿ ಮಮತಾ ಜಯರಾಮರೆಡ್ಡಿ ಅವರ ನಿರ್ಮಾಣದ, ಮುರುಗೇಶ್ ಕಣ್ಣಪ್ಪ ಅವರ ನಿರ್ದೇಶನದ ‘ಅಗ್ರಸೇನಾ’ ಚಿತ್ರವೀಗ ಬಿಡುಗಡೆಯ ಸನಿಹಕ್ಕೆ ಬಂದಿದೆ. ಜೂನ್ ೨೩ಕ್ಕೆ ರಿಲೀಸಾಗಲು ಸಿದ್ದವಾಗಿರುವ ಈ ಚಿತ್ರದ ಮೇಕಿಂಗ್ ವೀಡಿಯೋ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಅಮರ್ ವಿರಾಜ್ ಹಾಗೂ ರಚನಾ ದಶರಥ್ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಅಗಸ್ತ್ಯ ಬೆಳಗೆರೆ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ, ಹಿರಿಯನಟ ರಾಮಕೃಷ್ಣ ಅವರು ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಇದು ಅವರ ೨೦೦ನೇ ಚಿತ್ರ ಎನ್ನುವುದು ವಿಶೇಷ. ಭಜರಂಗಿ ಹರ್ಷ ಜೊತೆ ಕೆಲಸ ಮಾಡಿರುವ ಮುರುಗೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕಿ ಮಮತಾ ಜಯರಾಮರೆಡ್ಡಿ ನಮ್ಮ ಚಿತ್ರದ ಟೀಸರ್, ಇಂಟ್ರೊಡಕ್ಷನ್ ಹಾಡು ಮಿಲಿಯನ್ ಗೂ ಹೆಚ್ಚು ವೀಕ್ಷಣೆಯಾಗಿದೆ. ಅಲ್ಲದೆ ದಸರಾ ಬೊಂಬೆ ಹಾಡೂ ಹೆಚ್ಚು ರೀಚ್ ಆಗಿದೆ. ಒಳ್ಳೆಯ ಸಿನಿಮಾ ಮಾಡಿದರೆ ಜನ ಖಂಡಿತ ನೋಡ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ನಿರ್ಮಾಪಕಿ ಸೌಮ್ಯ ಜಯರಾಮರೆಡ್ಡಿ ಮತ್ತು ನಿರ್ಮಾಪಕ ಜಯರಾಮ ರೆಡ್ಡ ದಂಪತಿ


ನಂತರ ಜಯರಾಮರೆಡ್ಡಿ ಮಾತನಾಡಿ ಸಿನಿಮಾ ರಿಲೀಸ್‌ಗೂ ಮುಂಚೆ ನಿರ್ಮಾಪಕರು, ಚಿತ್ರತಂಡ ಮಾತ್ರ ಕಾಣಿಸುತ್ತೆ. ರಿಲೀಸ್ ಹಂತದಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಜನರಿಗೆ ತಲುಪಿಸಿ, ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಬಂದಿದೆ ಎಂದರು. ನಿರ್ದೇಶಕ ಮುರುಗೇಶ್ ಮಾತನಾಡಿ ಇದೊಂದು ಫ್ಯಾಮಿಲಿ ಡ್ರಾಮಾ. ಇಂಟ್ರೊಡಕ್ಷನ್ ಹಾಡನ್ನು ಶಿವಣ್ಣ ರಿಲೀಸ್ ಮಾಡಿದ್ದರು. ಇಂದು ಆಕ್ಷನ್ ಟೀಸರ್ ರಿಲೀಸಾಗಿದೆ. ಡಬಲ್ ಟ್ರಾಕ್‌ನಲ್ಲಿ ಕಥೆ ನಡೆಯುತ್ತದೆ, ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ಟ್ರಾಕ್‌ನಲ್ಲಿ ಸಾಗುತ್ತದೆ. ರಾಮಕೃಷ್ಣ ಅವರ ಪಾತ್ರಕ್ಕೂ ಎರಡು ಶೇಡ್ ಇದೆ. ಬೆಳಗಾವಿಯ ನಾಗರಾಜ ದೇಸಾಯಿ ಅವರ ಚಚ್ಚಡಿ ವಾಡೆಯಲ್ಲಿ ೧೫ ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದರು.

ಅಗ್ರಸೇನಾ ಚಿತ್ರತಂಡ


ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ಮಾತನಾಡಿ ಚಿತ್ರದಲ್ಲಿ ೬ ಹಾಡುಗಳನ್ನು ಕಂಪೋಜ್ ಮಾಡಿದ್ದೇವೆ. ಹಾಡುಗಳು ಒಳ್ಳೆಯ ಮೈಲೇಜ್ ತಗೊಂಡಿವೆ. ಚಿತ್ರದ ಪ್ರತಿ ಹಂತದಲ್ಲೂ ತಿರುವುಗಳನ್ನು ನೋಡಬಹುದು. ಇದು ನಮಗೆ ಬಿಜಿಎಂ ಮಾಡಲು ಅನುಕೂಲವಾಯಿತು. ಕಥೆ ಸಪೋರ್ಟ್ ಮಾಡಿದಾಗಲೇ ಮ್ಯೂಸಿಕ್‌ನಲ್ಲಿ ಹೊಸತನ ಮಾಡಲು ಅನುಕೂಲವಾಗುತ್ತದೆ. ಚೆನ್ನೈ, ಹೈದರಾಬಾದ್, ಕೊಚ್ಚಿನ್‌ನಲ್ಲಿ ಮ್ಯೂಸಿಕ್ ಮಾಡಿದ್ದೇವೆ. ಒಳ್ಳೇ ಔಟ್‌ಪುಟ್ ಕೊಟ್ಟಿದ್ದೇನೆಂಬ ನಂಬಿಕೆಯಿದೆ ಎಂದರು. ನಾಯಕ ಅಮರ್ ವಿರಾಜ್ ಮಾತನಾಡಿ ಈ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ. ನಮ್ಮ ಚಿತ್ರದ ಕಂಟೆಂಟ್ ತುಂಬಾ ಸ್ಟ್ರಾಂಗ್ ಆಗಿದೆ. ನಾನು ಸಿಟಿಯ ಭಾಗದಲ್ಲಿ ಬರುತ್ತೇನೆ ಎಂದರು. ಮತ್ತೊಬ್ಬ ನಾಯಕ ಅಗಸ್ತ್ಯ ಮಾತನಾಡಿ ಚಿತ್ರದಲ್ಲಿ ನಾನು ಆದಿಶೇಷನಾಗಿ ಕಾಣಿಸಿಕೊಂಡಿದ್ದು, ರಾಮಕೃಷ್ಣ ಅವರು ನನ್ನ ತಂದೆಯಾಗಿ ನಟಿಸಿದ್ದಾರೆ. ಹಳ್ಳಿಯ ಜನ ಯಾವುದೇ ಕಾರಣಕ್ಕೂ ಹಳ್ಳಿಬಿಟ್ಟು ಪಟ್ಟಣಕ್ಕೆ ಹೋಗಬಾರದು ಎಂಬುದು ನನ್ನ ಇಚ್ಚೆ. ಪಟ್ಟಣದ ಜನ ಮೋಸಗಾರರು ಎಂದು ನಾನು ಯಾರನ್ನೂ ಹಳ್ಳಿಬಿಟ್ಟು ಹೋಗಲು ಬಿಡುವುದಿಲ್ಲ, ಆದರೆ ಒಮ್ಮೆ ನಾನೇ ಸಿಟಿಗೆ ಬರುವಂಥ ಸಂದರ್ಬ ಬರುತ್ತದೆ, ನಿರ್ದೇಶಕರು ಹೇಳಿದಹಾಗೆ ಇಂಟರ್‌ವಲ್ ಬ್ಲಾಕ್ ಅದ್ಭುತವಾಗಿ ಬಂದಿದೆ. ರೈನ್ ಎಫೆಕ್ಟ್ ಸೀನ್ ಮಾಡುವಾಗ ಇಂಜುರಿ ಆಗಿತ್ತು, ಎಂದು ತನ್ನ ಅನುಭವ ಹೇಳಿಕೊಂಡರು. ಆರ್.ಪಿ.ರೆಡ್ಡಿ ಅವರ ಛಾಯಾಗ್ರಹಣ, ಎಂ.ಎಸ್. ತ್ಯಾಗರಾಜ್ ಅವರ ಸಂಗೀತ ನಿರ್ದೇಶನ, ಚೇತನ್ ಕುಮಾರ್, ಗೌಸ್‌ಪೀರ್, ವಿಜಯ್, ಶಿವು ಬೆರಗಿ ಅವರ ಸಾಹಿತ್ಯ, ವಿಜಯ್ ಎಂ. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಭಾರತಿ ಹೆಗ್ಡೆ ಅಲ್ಲದೆ ನಿರ್ಮಾಪಕರ ಪುತ್ರಿ ತನಿಶರೆಡ್ಡಿ ಸಹ ಚಿತ್ರದ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

cinibeat