‘ಐರಾ’ ಚಿತ್ರದ ಟೀಸರ್ ಬಿಡುಗಡೆ !

 ‘ಐರಾ’ ಚಿತ್ರದ ಟೀಸರ್ ಬಿಡುಗಡೆ !

ಐರಾ ಎನ್ನುವುದು ಸಂಸ್ಕೃತ ಪದ, ಪ್ರಕೃತಿಯಲ್ಲಿ ಏನಾದರೂ ಒಂದು ಕ್ರಿಯೆ ನಡೆಯುವ ಮುನ್ನ ವಿಚಿತ್ರ ಶಬ್ದವೊಂದು ಕೇಳಿಬರುತ್ತದೆ. ಆ ಶಬ್ದವನ್ನೇ ಐರಾ ಎನ್ನುತ್ತೇವೆ. ಇದು ನಿರ್ದೇಶಕ ರಾಜ್ಉದಯ್ ಟೈಟಲ್ ಕುರಿತು ನೀಡಿರುವ ಮಾಹಿತಿ.
ಇತ್ತೀಚೆಗೆ ಇಂಥ ವಿಶೇಷ ಶೀರ್ಷಿಕೆ ಹೊಂದಿರುವ ಐರಾ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ನಿರ್ಮಾಪಕ ಜಾಕ್ ಮಂಜು, ನಟ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು, ಸುರೇಶ್ ಸುಬ್ರಮಣ್ಯ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವು ಹಾಗೂ ಮೀನಾಕ್ಷಿ ಈ ಚಿತ್ರದಲ್ಲಿ ತಾಯಿ, ಮಗನಾಗಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕೌಶಿಕ್ ಹರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಘ್ನೇಶ್ ನಾಗೇಂದ್ರ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ.

ಮಾಸ್ತಿಗುಡಿ ದುರಂತದಲ್ಲಿ ಮಡಿದ ಉದಯ್ ನನ್ನ ಸ್ವಂತ ಭಾಮೈದ, ಉದಯ್‌ಗಾಗೇ ಈ ಕಥೆ ರೆಡಿ ಮಾಡಿಕೊಂಡಿದ್ದೆ. ಐರಾ ನನ್ನ ಕನಸು, ಈ ಕಥೆಯನ್ನು ನೂರಾರು ನಿರ್ಮಾಪಕರ ಬಳಿ ತೆಗೆದುಕೊಂಡು ಹೋಗಿದ್ದೆ. ಕಥೆಯನ್ನು ಇಷ್ಟಪಟ್ಟರೂ, ಹೀರೋ ಹೆಸರು ಕೇಳಿದ ಕೂಡಲೇ ನೋಡೋಣ ಎನ್ನುತ್ತಿದ್ದರು. ಆದರೆ ಸುರೇಶ್ ಸುಬ್ರಮಣ್ಯ ಚಿತ್ರ ಅರ್ಧದಲ್ಲೇ ನಿಲ್ಲುವ ಸ್ಥಿತಿಯಲ್ಲಿದ್ದಾಗ ಮುಂದೆ ಬಂದರು, ಅನಾಥ ಹುಡುಗನೊಬ್ಬನ ಸುತ್ತ ನಡೆವ ಕಥೆಯಿದು, ಆತ ಏಕೆ ಹುಚ್ಚನಾದ, ಅದರ ಹಿನ್ನೆಲೆಯೇನು ಅನ್ನೋದೇ ಈ ಚಿತ್ರದ ಕಥೆ. ವಿಶೇಷವಾಗಿ ಮದರ್ ಸಂಟಿಮೆಟ್ ಸಾಂಗನ್ನು ಜೋಗಿಪ್ರೇಮ್ ಅವರು ಹಾಡುತ್ತಿದ್ದಾರೆ. ೧೫ ದಿನಗಳ ಕಾಲ ಬನಶಂಕರಿಯ ಸ್ಮಶಾನದಲ್ಲಿ ನಂತರ ಆಂದ್ರಹಳ್ಳಿ ದೇವಸ್ಥಾನವೊಂದರಲ್ಲಿ ಚಿತ್ರೀಕರಣ ನಡೆಸಿದ್ದು, ಸದ್ಯದಲ್ಲೇ ೨ನೇ ಹಂತದ ಶೂಟಿಂಗ್ ಆರಂಭಿಸುತ್ತಿದ್ದೇವೆ. ಪ್ರಕೃತಿಯಲ್ಲಿ ಏನಾದರೂ ಕ್ರಿಯೆ ಆಗಬೇಕಾದರೆ ಅದರ ಮುನ್ಸೂಚನೆ ಎಂಬಂತೆ ಒಂದು ಸೌಂಡ್ ಕೇಳಿಬರುತ್ತದೆ, ಅದೇ ಐರಾ ಎಂದು ವಿವರಿಸಿದರು.

ಚಿತ್ರದ ನಾಯಕ ಶಿವು ಮಾತನಾಡುತ್ತ ನಾನು ರಾಜ್‌ಉದಯ್ ಸೇರಿ ಐದು ವರ್ಷಗಳ ಕಾಲ ತಾಯಿ ಸೆಂಟಿಮೆಂಟ್ ಇರುವ ಈ ಕಥೆಯನ್ನು ರೆಡಿ ಮಾಡಿದೆವು. ಒಬ್ಬ ನಿರ್ಮಾಪಕರೂ ಸಿಗಲಿಲ್ಲ ಅಂತ ಇಬ್ಬರೂ ಬಹಳಸಾರಿ ಅತ್ತಿದ್ದೇವೆ. ಕೊನೆಗೆ ಸುರೇಶ್ ಸುಬ್ರಮಣ್ಯ ಅವರು ಸಿಕ್ಕರು. ಇದರಲ್ಲಿ ನನ್ನ ಪಾತ್ರಕ್ಕೆ ಹುಚ್ಚನ ಕ್ಯಾರೆಕ್ಟರ್ ಅಲ್ಲದೆ ಹಲವಾರು ಗೆಟಪ್‌ಗಳಿವೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಾಕ್‌ಮಂಜು ಮಾತನಾಡಿ ಕನಸುಗಳನ್ನು ಹೊತ್ತ ತಂಡ ಇಲ್ಲಿದೆ, ಇವರೆಲ್ಲರ ಕನಸು ಈಡೇರಲಿ, ಎಲ್ಲರಿಗೂ ಒಳ್ಳೇ ಹೆಸರು ಬರಲಿ, ಟೀಸರ್ ಬಹಳ ಅದ್ಭುತವಾಗಿ ಬಂದಿದೆ, ಟೀಸರ್‌ನಲ್ಲಿ ಹಾಡಿನ ತುಣುಕನ್ನೂ ಸೇರಿಸಿರುವುದು ಒಳ್ಳೇ ಪ್ರಯತ್ನ, ಇವರೆಲ್ಲ ಮಾತಾಡುವಾಗ ನನ್ನ ಮೊದಲಚಿತ್ರ ಡೆಡ್ಲಿಸೋಮ ನೆನಪಾಯ್ತು ಎಂದರು, ನಟ ಮೋಹನ್ ಮಾತನಾಡಿ ಮೊದಲಹೆಜ್ಜೆ ಇಡೋದೇ ಕಷ್ಟ, ಈ ಹುಡುಗರು ಆಗಲೇ ಯಶಸ್ಸು ಗಳಿಸಿದ್ದಾರೆ.. ನಾನೊಬ್ಬ ನಿರ್ದೇಶಕನಾಗಿ ಗುರುತಿಸಿಕೊಳ್ಳಲು ೮ ವರ್ಷಗಳ ಕಾಲ ಕಾದಿದ್ದೆ ಎಂದು ತನ್ನ ಅನುಭವ ಹಂಚಿಕೊಂಡರು. ನಾಯಕನ ತಾಯಿ ಪಾತ್ರ ಮಾಡಿರುವ ಮೀನಾಕ್ಷಿ, ಮತ್ತೊಬ್ಬ ಪ್ರಮುಖ ಪಾತ್ರಧಾರಿ ಕಾರ್ತೀಕ್ ವರ್ಣೇಕರ್ ಚಿತ್ರದ ಕುರಿತಂತೆ ತಮ್ಮ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ ಮಾತನಾಡಿ ನಿಜವಾದ ಸ್ಮಶಾನದಲ್ಲಿ ಶೂಟ್ ಮಾಡಿದ್ದೇವೆ, ರಿಯಲ್ ಹೆಣದ ಜತೆಗೇ ನಾಯಕ ಶಿವು ಆಕ್ಟ್ ಮಾಡಿದ್ದಾರೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡಿ ಚಿತ್ರದಲ್ಲಿ ೪ ಹಾಡುಗಳಿವೆ, ನನ್ನ ಸಹೋದರ ಚೇತನ್ ಸಾಹಿತ್ಯ ಬರೆದಿದ್ದಾರೆ ಎಂದರು.

cinibeat