ಮೂವರು ಸುಂದರಿಯರ ಮುದ್ದಿನ ನಾಯಕ ಧರ್ಮ!

 ಮೂವರು ಸುಂದರಿಯರ ಮುದ್ದಿನ ನಾಯಕ ಧರ್ಮ!

ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ “ಸುಮನ್” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಎಸ್ ಆರ್ ವಿ ಥಿಯೇಟರ್ ನಲ್ಲಿ ನಡೆಯಿತು. ಎ.ಶಾಂತ್ ಕುಕ್ಕೂರ್ ಸಾಹಿತ್ಯದ ಹಾಗೂ ಜುಬಿನ್ ಪಾಲ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಖ್ಯಾತ ನಿರ್ದೇಶಕ ನಂದಕಿಶೋರ್ ಬಿಡುಗಡೆ ಮಾಡಿದರು.
ಅವರ ತಂದೆ ಕೀರ್ತಿ ರಾಜ್ ಹಾಗೂ ನನ್ನ ತಂದೆ ಸುಧೀರ್ ಆತ್ಮೀಯ ಸ್ನೇಹಿತರು. ನಾನು ಮತ್ತು ಧರ್ಮ ಕೀರ್ತಿ ಕೂಡ ಹಾಗೆ. ಧರ್ಮ ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದಾನೆ. ಅವನಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ನಂದಕಿಶೋರ್. 

ಇದೊಂದು ತ್ರಿಕೋನ ಪ್ರೇಮಕಥೆ‌. ಐದು ಹಾಡುಗಳು ಹಾಗೂ ಐದು ಸಾಹಸ‌ ಸನ್ನಿವೇಶಗಳಿದೆ. ಸುಮಾರು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ನಾನು, “ಮುತ್ತುಕುಮಾರ” ಎಂಬ ಚಿತ್ರ ನಿರ್ದೇಶಿಸಿದ್ದೇನೆ. ಇದು ಎರಡನೇಯ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ  ರವಿ ಸಾಗರ್.
ಕೊರೋನ ಆರಂಭವಾಗುವುದಕ್ಕೆ ಮುಂಚೆ ನಮ್ಮ ಚಿತ್ರ ಆರಂಭವಾಗಿತ್ತು. ಕೊರೋನ ಮೊದಲ ಹಾಗೂ ಎರಡನೇ ಅಲೆ ಮುಗಿದ ಮೇಲೆ ಚಿತ್ರೀಕರಣ ಮುಗಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಚಿತ್ರ‌ ಪೂರ್ಣ ಮಾಡಿರುವ ನಮ್ಮ ನಿರ್ಮಾಪಕರಿಗೆ ವಿಶೇಷ ಧನ್ಯವಾದ.  ನನ್ನೊಂದಿಗೆ ಮೂವರು ನಾಯಕಿಯರು ನಟಿಸಿದ್ದಾರೆ. ಎಲ್ಲರ ಅಭಿನಯ ಚೆನ್ನಾಗಿದೆ. ಜುಬಿನ್ ಪಾಲ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಇಂಪಾಗಿದೆ. ಮೂರನೆ ಅಲೆಯ ಆರ್ಭಟ ಕಡಿಮೆಯಿದ್ದರೆ ಚಿತ್ರ ಫೆಬ್ರವರಿಯಲ್ಲಿ‌ ತೆರೆಗೆ ಬರಲಿದೆ‌ ಎಂದು ಧರ್ಮ ಕೀರ್ತಿರಾಜ್ ತಿಳಿಸಿದರು.

ಎರಡು ವರ್ಷಗಳ ನಂತರ ನನ್ನ ಚಿತ್ರವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ. ಚಿತ್ರದ ಕಥೆ ಚೆನ್ನಾಗಿದೆ ಎಂದ ನಿಮಿಕಾ ಕೊರೆವ ಚಳಿಯಲ್ಲಿ ಚಿತ್ರೀಕರಣದಲ್ಲಿ ಅಭಿನಯಿಸಿದ ಅನುಭವ ಹಂಚಿಕೊಂಡರು. ‌ನಾನು ನಿಜಜೀವನದಲ್ಲೂ ಸ್ವಲ್ಪ ಸ್ಟ್ರಾಂಗ್.  ಯಾವುದಕ್ಕೂ ಅಷ್ಟು ಬೇಗ ಹೆದರಲ್ಲ. ಈ ಚಿತ್ರದಲ್ಲಿ ಅಂತಹದೇ ಪಾತ್ರ. ನನ್ನೂರು ಮೈಸೂರು. ಹೆಚ್ಚಾಗಿ  ಮೈಸೂರಿನಲ್ಲೇ ಚಿತ್ರೀಕರಣವಾಗಿದ್ದು ಸಂತೋಷ ಎನ್ನುತ್ತಾರೆ ರಜನಿ ಭಾರದ್ವಾಜ್.

ನನ್ನದು ಇದು ಮೊದಲ ಚಿತ್ರ. ಸ್ವಲ್ಪ ನೆಗಟಿವ್ ಪಾತ್ರ. ಧರ್ಮ ಅವರ ಜೊತೆ ನಟಿಸಿದ್ದು ಸಂತಸ ತಂದಿದೆ.  ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು ಮತ್ತೊಬ್ಬ ನಾಯಕಿ ಜೈಲಿನ್ ಗಣಪತಿ. ಹಾಡುಗಳ ಹಾಗೂ ಹಾಡಿದವರ ಬಗ್ಗೆ ಸಂಗೀತ ನಿರ್ದೇಶಕ ಜುಬಿನ್ ಪಾಲ್ ಮಾಹಿತಿ ನೀಡಿದರು. ಎಂ.ಪಿ.ಶಿವಕುಮಾರ್, ರಾಘವೇಂದ್ರ ಸಿಂಗ್ , ಮೋಹನ್ ಕುಮಾರ್ ಎಸ್ ಹಾಗೂ ನೃತ್ಯ ನಿರ್ದೇಶಕ ನಾಗಿ ಚಿತ್ರದ ಕುರಿತು ಮಾತನಾಡಿದರು.

cinibeat