ಸಲಗ ಸಕ್ಸಸ್ ಆದರೂ ವಿಜಯ್ ದುನಿಯಾದಲ್ಲಿ ಖುಷಿಯಿಲ್ಲ!

 ಸಲಗ ಸಕ್ಸಸ್ ಆದರೂ ವಿಜಯ್ ದುನಿಯಾದಲ್ಲಿ ಖುಷಿಯಿಲ್ಲ!

ಅಪ್ಪ, ಅಮ್ಮ, ಅಪ್ಪು ಇಲ್ಲ ಹೀಗಾಗಿ ಹುಟ್ಟುಹಬ್ಬ ಆಚರಿಸಲ್ಲ…

ನಟ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ ಸಿನಿಮಾ ಸಲಗ. ಕಳೆದ ವರ್ಷದ ಸೂಪರ್‍ಹಿಟ್ ಲಿಸ್ಟ್ ಸೇರಿದ ಸಿನಿಮಾ. ಜತೆಗೆ ನಟ ದುನಿಯಾ ವಿಜಯ್ ಅವರ ಕರಿಯರ್‍ಗೆ ಹೊಸ ಜೀವ ನೀಡಿದ ಚಿತ್ರ ಅಂದರೂ ತಪ್ಪಾಗಲಾರದು. ಆದರೆ ಸಲಗ ಅವರ ಸಿನಿಮಾದಲ್ಲಿ ಎಷ್ಟು ಸಿಹಿ ನೀಡಿತೋ, ಆದರೆ ಆ ಸಿಹಿಯನ್ನು ಸವಿಯುವ ಅವಕಾಶ ದುನಿಯಾ ವಿಜಯ್ ಅವರಿಗೆ ಸಿಗಲಿಲ್ಲ.

ಹೌದು, ದುನಿಯಾ ವಿಜಯ್ ಅವರ ತಂದೆ ತಾಯಿ ಇಬ್ಬರೂ ಕಳೆದ ವರ್ಷ ಕೇವಲ ನಾಲ್ಕೈದು ತಿಂಗಳ ಅಂತರದಲ್ಲಿ ವಿಧಿ ವಿಶರಾದರು. ಅವರ ಅಂತಿಮ ವಿಧಿ ವಿಧಾನ ಪೂರೈಸಿದ ಬಳಿಕ ತಮ್ಮ ಹುಟ್ಟೂರಿನಲ್ಲಿ ಸ್ಮಾರಕವನ್ನೂ ನಿರ್ಮಿಸಿದ್ದಾರೆ ವಿಜಿ. ಜತೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡ ನೋವು ಸಹ ಅವರನ್ನು ಈಗಲೂ ಕಾಡುತ್ತಿದೆ. ಹೀಗಾಗಿಯೇ ನಾಳೆ ಅರ್ಥಾತ್ ಜನವರಿ 20ರಂದು ಅವರ ಹುಟ್ಟುಹಬ್ಬವನ್ನು ಆಚರಿಸದಿರಲು ವಿಜಯ್ ತೀರ್ಮಾನಿಸಿದ್ದಾರೆ.

ಅಭಿಮಾನಿಗಳಿಗೆ ನಮಸ್ಕಾರ. ಇಡಿ ಜಗತ್ತು ಸಂಕಷ್ಟದಲ್ಲಿರುವ ಸಮಯವಿದು. ಇಂತಹ ಸಮಯದಲ್ಲಿ ನನಗೊಂದು ಅಭೂತಪೂರ್ವ ಗೆಲುವನ್ನು ನೀವೆಲ್ಲರೂ ಕೊಟ್ಟಿದ್ದೀರ. ಇಂತಹ ಹೊತ್ತಿನಲ್ಲಿ ನಿಮಗೆ ನನ್ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ಆಸೆ ನಿಮಗೆ ಇದೆ ಎಂಬುದು ನನಗೆ ಗೊತ್ತು. ನನಗೂ ನಿಮ್ಮನ್ನೆಲ್ಲಾ ನನ್ನ ಹುಟ್ಟು ಹಬ್ಬದ ದಿನ ಭೇಟಿಯಾಗಬೇಕು ಎಂಬ ಆಸೆಯಿತ್ತು.


ಕಳೆದ ನಾಲ್ಕು ದಶಕಗಳಿಂದ ನನ್ನನ್ನು ಸಾಕಿ ಸಲಹಿದ ನನ್ನಮ್ಮ, ಅಪ್ಪ ಈ ವರ್ಷ ವಿಧಿಯಾಟಕ್ಕೆ ಬಲಿಯಾದರು. ಹಾಗೂ ಆತ್ಮೀಯರಾದ ಪುನೀತ್ ರಾಜ್ ಕುಮಾರ್ ಸಹ ನಮ್ಮನ್ನೆಲ್ಲಾ ಬಿಟ್ಟು ಹೋದರು. ಈ ನೋವುಗಳನ್ನು ಇಟ್ಟುಕೊಂಡು ನಾನು ಹುಟ್ಟು ಹಬ್ಬವನ್ನು ಹೇಗೆ ಸಂಭ್ರಮಿಸಲಿ. ಜತೆಗೆ ಕೋವಿಡ್ ಕೇಸುಗಳು ಸಹ ದಿನೇ ದಿನೇ ಹೆಚ್ಚಾಗುತ್ತಿವೆ. ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಮತ್ತು ನನಗೆ ಅಪ್ಪ, ಅಮ್ಮ, ಅಪ್ಪುಅವರನ್ನು ಕಳೆದುಕೊಂಡ ನೋವು ಕಾಡುತ್ತಿರುವುದರಿಂದ ಈ ವರ್ಷ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹುಟ್ಟು ಹಬ್ಬದ ದಿನ ನಾನು ಮನೆಯಲ್ಲಿ ಇರುವುದಿಲ್ಲ ಹಾಗಾಗಿ ಯಾರೂ ಮನೆಯ ಬಳಿ ಬರಬೇಡಿ. ನೀವಿದ್ದ ಕಡೆಯಿಂದಲೇ ನನಗೆ ಹಾರೈಸಿ. ಅಪ್ಪ ಅಮ್ಮನನ್ನು ಕಳೆದುಕೊಂಡ ನನಗೆ ನನ್ನ ಅಭಿಮಾನಿಗಳೆ ಅಪ್ಪ ಅಮ್ಮ ಎಲ್ಲವೂ.ಹಾಗಾಗಿ‌‌ ನಿಮ್ಮ ಹಾರೈಕೆ ಆಶೀರ್ವಾದ ಎರಡು ನನ್ನ ಮೇಲಿರಲಿ.

ಧನ್ಯವಾದಗಳೊಂದಿಗೆ ನಿಮ್ಮವ
ದುನಿಯಾ ವಿಜಯ್…

cinibeat