“ಕರ್ನಾಟಕದ ಜಲಿಯನ್ ವಾಲಾಬಾಗ್” ಕಿರುಚಿತ್ರಕ್ಕೆ ಪ್ರಶಂಸೆ!
ಪ್ರತಿಭಾವಂತರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಕಿರುಚಿತ್ರ. ಎಷ್ಟೋ ಕಿರುಚಿತ್ರಗಳಲ್ಲಿ ದೊಡ್ಡ ವಿಷಯಗಳನ್ನು ಹೇಳಬಹುದು. ಅಂತಹ ಒಂದು ಪ್ರಯತ್ನ ಮಾಡಿದ್ದಾರೆ ವಾಗೀಶ್ ಆರ್ ಕಟ್ಟಿ.
ನಾನು ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್. ನನ್ನೂರು ಗೌರಿಬಿದನೂರು. ನಮ್ಮೂರಿನ ಬಳಿ ವಿದುರಾಶ್ವಥ ಎಂಬ ಪುರಾಣ ಪ್ರಸಿದ್ದವಾದ ಹಳ್ಳಿಯಿದೆ. ಇದು ಪುರಾಣ ಪ್ರಸಿದ್ಧವೂ ಹೌದು. ಇತಿಹಾಸ ಪ್ರಸಿದ್ದವೂ ಹೌದು. ಏಕೆಂದರೆ 1938ರಲ್ಲಿ ಈ ಊರಿನಲ್ಲಿ ಸ್ವತಂತ್ರಕ್ಕಾಗಿ ಸುಮಾರು ನಲವತ್ತಕ್ಕೂ ಅಧಿಕ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಇದನ್ನು “ಸೌತ್ ಇಂಡಿಯಾ ಜಲಿಯನ್ ವಾಲಾಬಾಗ್” ಎನ್ನಬಹುದು. ಈ ವಿಷಯದ ಬಗ್ಗೆ ಮೂವತ್ತೈದು ನಿಮಿಷಗಳ ಕಿರುಚಿತ್ರ ಮಾಡಿದ್ದೇನೆ. ನಾನು ಈ ವಿಷಯವನ್ನು ನಮ್ಮೂರಿ ಪುಟ್ಡಸ್ವಾಮಿ ಗೌಡರ ಮುಂದೆ ಹೇಳಿದಾಗ , ಒಳ್ಳೆಯ ಪ್ರಯತ್ನ ಮಾಡು. ಈ ವಿಷಯ ವಿಶ್ವದಾದ್ಯಂತ ತಿಳಿಯಲಿ. ನಾನು ನಿರ್ಮಾಣ ಮಾಡುತ್ತೇನೆ ಎಂದರು. ಹಿರಿಯ ನಟರಾದ ಶ್ರೀನಿವಾಸಮೂರ್ತಿ ಹಾಗೂ ಶೋಭ್ ರಾಜ್ ಅವರನ್ನು ಬಿಟ್ಟು ಬೇರೆ ಎಲ್ಲಾ ಹೊಸಬರೆ. ಸುಮಾರು ನೂರು ಜನ ಹೊಸ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ಎಲ್ಲರು ತರಭೇತಿ ಪಡೆದು ಆನಂತರ ಅಭಿನಯಿಸಿದ್ದಾರೆ. ಇದೇ ಗಣರಾಜ್ಯೋತ್ಸವದ ದಿನ ಸಂಜೆ 6 ಗಂಟೆಗೆ ನಮ್ಮದೇ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು ವಾಗೀಶ್ ಆರ್ ಕಟ್ಟಿ.
ನಮ್ಮೂರಿನ ಸ್ವತಂತ್ರ ಸಂಗ್ರಾಮದ ವಿಷಯ ಎಲ್ಲರಿಗೂ ತಿಳಿಸುವ ಪ್ರಯತ್ನಕ್ಕೆ ಬೆಂಬಲ ನೀಡಿದ್ದೀನಿ. ಕಿರುಚಿತ್ರ ಚೆನ್ನಾಗಿ ಮೂಡಿಬಂದಿದೆ. ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ ಎಂದರು ನಿರ್ಮಾಪಕ ಪುಟ್ಡಸ್ವಾಮಿ ಗೌಡ.
ಇಂತಹ ಕಿರುಚಿತ್ರದಲ್ಲಿ ಅಭಿನಯಿಸಿದ್ದು ಸಂತಸ ತಂದಿದೆ. ವಾಗೀಶ್ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಭಿನಯಿಸಿರುವ ಎಲ್ಲಾ ಹೊಸ ಕಲಾವಿದರ ಕನ್ನಡ ಉಚ್ಚಾರಣೆ ಚೆನ್ನಾಗಿದೆ ಎಂದರು ಹಿರಿಯ ನಟ ಶ್ರೀನಿವಾಸಮೂರ್ತಿ.
ಈ ಕೊರೋನ ಬಂದ ಮೇಲಂತೂ ಮಕ್ಕಳಿಗೆ ಮೊಬೈಲೇ ಪ್ರಪಂಚ. ಬೇರೇನು ಬೇಡ. ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಇಂತಹ ವಿಷಯ ತಿಳಿಸುವುದು ಅವಶ್ಯಕ. ಈ ಕಥೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಸಮಸ್ತ ಕನ್ನಡಿಗರ ಪರವಾಗಿ ವಾಗೀಶ್ ಕಟ್ಟಿ ಅವರಿಗೆ ಹಾಗೂ ನಿರ್ಮಾಪಕರಿಗೆ ಅಭಿನಂದನೆ ತಿಳಿಸುತ್ತೇನೆ. ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿದೆ. ನಿಮ್ಮಿಂದ ಇಂತಹ ಉತ್ತಮ ಚಿತ್ರಗಳು ಹೆಚ್ಚು ಬರಲಿ ಎಂದು ಹಾರೈಸಿದರು ಹಿರಿಯ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ.
ಸಂಗೀತ ನೀಡಿರುವ ಶ್ರೀ ಸುರೇಶ್ , ಹಾಡು ಹಾಡಿರುವ ಪಂಡಿತ್ ರವೀಂದ್ರ ಸೊರಗಾವಿ ಹಾಗೂ ಛಾಯಾಗ್ರಹಕ ಕೆ.ಎಸ್.ಚಂದ್ರಶೇಖರ್ ತಮ್ಮ ಅನುಭವ ಹಂಚಿಕೊಂಡರು.